ಕಳಸ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರಿಂದ ಮನವಿ…

155
firstsuddi

ಮೂಡಿಗೆರೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳಸದ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದ್ದಾರೆ.
ಕಳಸ, ಹೊರನಾಡು ವಲಯದ ಆಶಾ ಕಾರ್ಯಕರ್ತೆಯರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಪ್ರೇಮ್ ಕುಮಾರ್ ಅವರಿಗೆ ತಮ್ಮ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ನೀಡಿದರು. ಕೋವಿಡ್-19 ನಂಥಹ ಅಪಾಯಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಹೇಳಿಕೊಳ್ಳುವಂಥಹ ಉತ್ತಮ ಸೌಲಭ್ಯಗಳು, ವೇತನ ಸೇರಿದಂತೆ ವಿವಿಧ ಯೋಜನೆಗಳ ಅವಶ್ಯಕತೆ ಇದೆ. ತಿಂಗಳಿಗೆ ಕನಿಷ್ಟ ರೂ.12 ಸಾವಿರ ವೇತನ ನೀಡಬೇಕು. ಕೋವಿಡ್ ಕರ್ತವ್ಯಕ್ಕೆ ಹಾಜರಾಗುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ರಕ್ಷಣಾ ಸಾಧನಗಳನ್ನು ಒದಗಿಸಬೇಕು, ಒಂದು ವೇಳೆ ಯಾವುದಾದರೂ ಕಾರ್ಯಕರ್ತೆಯರಿಗೆ ಸೋಂಕು ತಗುಲಿದಲ್ಲಿ ಸಂಪೂರ್ಣ ಚಿಕಿತ್ಸಾ ವೆಚ್ಚದ ಜೊತೆ ಹೆಚ್ಚಿನ ವೇತನ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಶುಕ್ರವಾರದಿಂದ ಆಶಾ ಕಾರ್ಯಕರ್ತೆಯರು ಕ್ಷೇತ್ರದ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆಸ್ಪತ್ರೆಗೆ ನೀಡಬೇಕಾದ ವರದಿಗಳನ್ನು ನೀಡದೆ ಮನೆಯಲ್ಲಿಯೇ ಉಳಿದುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ರಾಜ್ಯ ಸಮಿತಿಯ ಸೂಚನೆ ಬರುವವರೆಗೂ ಯಾವುದೇ ಆಶಾ ಕಾರ್ಯಕರ್ತೆಯರು ಕೆಲಸ ಮಾಡಬಾರದೆಂದು ತೀರ್ಮಾನಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.
ಆಶಾ ಕಾರ್ಯಕರ್ತೆಯರ ಮುಖ್ಯಸ್ಥೆ ಪ್ರತಿಮಾ, ಕಾರ್ಯಕರ್ತೆಯರಾದ ಸುಶ್ಮಿತಾ, ಉಷಾ, ಪ್ರೇಮಾ, ಶಾಲಿನಿ, ಕವಿತಾ, ಪ್ರತಿಮಾ, ಸುಮತಿ, ಹೇಮಾ, ನೇತ್ರಾವತಿ ಮನವಿ ಸಲ್ಲಿಸುವ ವೇಳೆ ಹಾಜರಿದ್ದರು.