ಕೊರೊನಾ.. ಕೊರೊನಾ.. ಕೊರೊನಾ.. ನಿಜಕ್ಕೂ ಕೊರೊನಾ ಡೇಂಜರ್ ಅಲ್ವಾ..?

591
firstsuddi

ಪ್ರಶಾಂತ್, ಮೂಡಿಗೆರೆ

ಏನ್ ಆಗಿಲ್ಲ.. ಆದ್ರೆ ಈ ಮಾಧ್ಯಮದವರು ಅತಿ ಹೆಚ್ಚು ಪ್ರಚಾರ ಕೊಡ್ತಿದ್ದಾರೆ.. ಬರೀ ಕೊರೊನಾದ ನ್ಯೂಸೇ ತೋರಿಸುತಿದ್ದಾರೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನೇ ದೊಡ್ದದು ಮಾಡಿ ತೋರಿಸುತಿದ್ದಾರೆ.. ಅಂತದ್ದೇನೂ ಆಗೇ ಇಲ್ಲಪ್ಪಾ.. ಆದ್ರೂ ಅದೇ ಕೊರೊನಾ.. ಕೊರೊನಾ ಅಂತಾ ಹೇಳಿದ್ನೇ ಹೇಳ್ತಾರೆ… ಯೆಸ್, ಸದ್ಯ ಒಂದಷ್ಟು ಮಂದಿ ಆಡಿಕೊಳ್ತಿರೋ ಮಾತಿದು. ಬರೀ ಆಡಿಕೊಳ್ಳೋದು ಮಾತ್ರವಲ್ಲ ಮೀಡಿಯಾದವ್ರು ಹೆದರಿಸ್ತಿದ್ದಾರೆ ಅಂತಾ ಯಾರೋ ಒಂದು ವಿಡಿಯೋ ಮಾಡಿದ್ದು ಸಿಕ್ರೆ ಸಾಕು, ಅದ್ನ ಡಾಟಾ ಖಾಲಿಯಾಗೋವರ್ಗೂ ನೂರಾರು ಮಂದಿಗೆ ಫಾರ್ವರ್ಡ್ ಮಾಡಿ ತೃಪ್ತರಾಗೋ ಮಂದಿಗೆ ನನ್ನದೊಂದಿಷ್ಟು ಮಾತು..

ನಿಜಕ್ಕೂ ಕೊರೊನಾ ಡೇಂಜರ್ ಅಲ್ವಾ..? ಹಾಗಾದ್ರೆ ಯಾಕೆ ಇಡೀ ವಿಶ್ವವೇ ಇದರ ವಿರುದ್ಧ ಹೋರಾಟ ಮಾಡ್ತಿದೆ.. ? ನಮ್ಮ ದೇಶ, ರಾಜ್ಯ ಕೊರೊನಾವನ್ನ ನಿಯಂತ್ರಣ ಮಾಡಲು ಹಗಲಿರುಳು ಶ್ರಮಿಸುತ್ತಿರುವುದೇಕೆ..? ಕೆಲ್ಸ ಇಲ್ಲ ಅಂತನಾ… ಅಲ್ಲ ತಾನೇ..?

ಎಂತೆಂಥ ರೋಗಗಳು ಬಂದು ಹೋಗಿವೆ, ಆದ್ರೆ ಈ ಜನರೇಶನ್ ನೋಡ್ದೆ ಇರೋ, ಕೇಳ್ದೆ ಇರೋ ರೋಗವನ್ನ ನಾವು ಈಗ ನೋಡ್ತಿದ್ದೀವಿ ಅನ್ನೋದು ಸತ್ಯ ತಾನೇ..? ಇದರ ವ್ಯಾಪ್ತಿ ಹೇಗಿದೆ ಅನ್ನೋದನ್ನ ನಾವೆಲ್ಲರೂ ಅರಿತಿದ್ದೀವಿ ತಾನೇ.? ಎಲ್ಲೋ ಚೀನಾದ ಒಂದು ನಗರದಲ್ಲಿ ಶುರುವಾದ ಈ ರೋಗ, ಇಂದು ವಿಶ್ವದ ಮೂಲೆ ಮೂಲೆಗೆ ಹಬ್ಬಿಲ್ವಾ..? ನಮ್ಮ ದೇಶದ ಹಳ್ಳಿ ಹಳ್ಳಿಗೂ ವ್ಯಾಪಿಸಿಲ್ವಾ..?

ಮೊದಲು ಒಂದು, ಎರಡು ಅಂತಾ ಎಣಿಕೆ ಮಾಡ್ತಿದ್ದ ಸೋಂಕಿತರ ಪ್ರಕರಣಗಳು ಇದೀಗ ಅಂಕೆಗೆ ಸಿಗದಷ್ಟು ಏರಿಕೆ ಆಗ್ತಿಲ್ವಾ..? ಮಾರ್ಚ್ ಅಂತ್ಯದಲ್ಲಿ ದೇಶದಲ್ಲೇ ದಿನಕ್ಕೆ 50-100 ಪ್ರಕರಣಗಳು ವರದಿಯಾಗ್ತಿದ್ವು, ಆದರೆ ಇದೀಗ 30 ಸಾವಿರಕ್ಕೂ ಅಧಿಕ ಸೋಂಕಿತರು ಪ್ರತಿನಿತ್ಯ ಪತ್ತೆಯಾಗ್ತಿದ್ದಾರೆ. ಸೋಂಕಿತರ ಸಂಖ್ಯೆ ಸದ್ಯ 10 ಲಕ್ಷದ ಗಡಿ ದಾಟಿದೆ. ಹಾಗೆಯೇ ಒಂದೆರಡು ಮರಣಗಳು ವರದಿಯಾಗ್ತಿದ್ವು, ಆದರೆ ಇದೀಗ ಕೊರೊನಾದಿಂದ ನಿತ್ಯ ಸಾಯುವವರ ಸಂಖ್ಯೆ ದೇಶದಲ್ಲಿ 700ರ ಸಮೀಪವಿದೆ. ಒಟ್ಟು ಸಾವಿನ ಸಂಖ್ಯೆ 30 ಸಾವಿರದ ಸಮೀಪ ಬಂದು ನಿಂತಿದೆ.

ಬೇರೆ ಉದಾಹರಣೆ ಬೇಡ, ನಮ್ಮ ರಾಜ್ಯದ ಅಂಕಿಅಂಶಗಳತ್ತ ಒಮ್ಮೆ ಗಮನಹರಿಸಿ ನೋಡಿ. ಮೊದಲು ಬೆಂಗಳೂರಿನಿಂದ ಶುರುವಾದ ಕೊರೊನಾದ ಜಾಡು ಮಡಿಕೇರಿಯಲ್ಲಿ ಒಂದು ಪಾಸಿಟಿವ್ ಬಂತಂತೆ, ಕಲ್ಬುರ್ಗಿಯಲ್ಲಿ ಒಂದು ಸಾವು ಆಯ್ತಂತೆ ಅಂತಾ ಇಡೀ ರಾಜ್ಯದ ಮಂದಿಯೇ ಅಲರ್ಟ್ ಆಗಿ ನೆನಪಿನಲ್ಲಿಟ್ಟುಕೊಳ್ಳುವಂತಿತ್ತು. ಆದ್ರೆ ಇದೀಗ ನಮ್ಮ ನಮ್ಮ ಜಿಲ್ಲೆಯಲ್ಲೇ ಬರ್ತಿರೋ ಸೋಂಕಿತರ ಸಂಖ್ಯೆಯನ್ನ ನೆನಪು ಇಟ್ಟುಕೊಳ್ಳಲು ಸಾಧ್ಯವಾಗದಷ್ಟು ಕೊರೊನಾ ಫಾಸ್ಟಾಗಿ ಹರಡ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55 ಸಾವಿರ ದಾಟಿದೆ. 1 ಸಾವಿರಕ್ಕೂ ಅಧಿಕ ಮರಣ ಸಂಭವಿಸಿವೆ, ಪ್ರತಿನಿತ್ಯ ಮೃತರಾಗುವವರ ಸಂಖ್ಯೆ ನೂರರ ಗಟಿ ದಾಟಿದೆ.

ಜಾಸ್ತಿ ದೂರ ಬೇಡ, ಕಳೆದ ಮಾರ್ಚ್ ನಲ್ಲೇ ನಮ್ಮ ದೇಶದಲ್ಲಿ ಕೊರೊನಾ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಹಬ್ಬುತ್ತೆ, ಸಾವಿರಾರು ಜನರು ಸಾಯ್ತಾರೆ ಅಂತಾ ಇದೇ ಮಾಧ್ಯಮಗಳು ವರದಿ ಮಾಡಿದಾಗ ಮೂಗು ಮುರಿದವರೇ ಹೆಚ್ಚು, ಅದೇನ್ ಟ್ರೋಲ್, ಅದು ಯಾವ ರೀತಿಯ ಕುಹಕ, ಕೇಳ್ತಿರಾ..? ಆದರೆ ಸದ್ಯ ಆಗ್ತಿರೋದೇನು..? ಇದಷ್ಟೇ ಅಲ್ಲ ಭವಿಷ್ಯದ ಪರಿಸ್ಥಿತಿಯನ್ನ ನೆನಪಿಸಿಕೊಂಡ್ರೆ ನಿಜಕ್ಕೂ ಮುಂದಿನ ದಿನಗಳು ಸವಾಲಿನ ದಿನಗಳು ಅನ್ನೋದಂತೂ ಸ್ಪಷ್ಟ.

ಅಫ್ ಕೋರ್ಸ್ ಕೊರೊನಾದಿಂದ ಸಾಯುವವರ ಸಂಖ್ಯೆ ತುಂಬಾನೇ ಕಡಿಮೆ ಇದೆ ಒಪ್ಪಿಕೊಳ್ಳೋಣ. ಕೊರೊನಾ ಇಲ್ದಿದ್ರೆ ಅಪಘಾತ, ಗಲಾಟೆ, ಗ್ಯಾಂಗ್ ವಾರ್ ಅದು-ಇದು ಅಂತಾ ಸಾಯ್ತಿದ್ದವರ ಸಂಖ್ಯೆ ಹೆಚ್ಚೇ ಇರ್ತಿತ್ತು. ಆದರೆ ಈ ಅಂಕಿ ಅಂಶವನ್ನ ಕೊರೊನಾದ ಜೊತೆ ತಾಳೆ ಹಾಕೋದು ಮೂರ್ಖತನವಲ್ಲದೇ ಮತ್ತೇನು ಅಲ್ಲ.

ಯಾಕಂದ್ರೆ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಹಾಗಾಗಿಯೇ ಮಾರ್ಚ್ ನಲ್ಲಿ ದೇಶದಲ್ಲಿ ನೂರರ ಒಳಗಿದ್ದ ಸೋಂಕಿತರ ಸಂಖ್ಯೆ ಇದೀಗ 10 ಲಕ್ಷದ ಗಡಿ ದಾಟಿರೊದು. ಹೀಗೆ 100 ಇದ್ದಿದ್ದು ಸಾವಿರ ಅಲ್ಲ, ಹತ್ತು ಸಾವಿರ ಅಲ್ಲ, ಒಂದು ಲಕ್ಷ ಅಲ್ಲ, ಬರೋಬ್ಬರಿ 10 ಲಕ್ಷಕ್ಕೆ ಬಂದಿದೆ ಅಂದ್ರೆ, ಸದ್ಯ 10 ಲಕ್ಷ ಇರೋ ಸೋಂಕಿತರ ಸಂಖ್ಯೆ 10 ಕೋಟಿ ಟಚ್ ಆಗಲು ಜಾಸ್ತಿ ಸಮಯ ಬೇಡ ಅಲ್ವಾ..? ಆಗ ದಿನಕ್ಕೆ ಸಾಯುವವರ ಸಂಖ್ಯೆ ಎಷ್ಟಾಗಬಹದು ನೀವೇ ಊಹಿಸಿ.

ಈ ಮಧ್ಯೆ ಐಐಟಿ ಸೇರಿದಂತೆ ನುರಿತ ತಜ್ಞರ ತಂಡಗಳೇ ವರದಿ ನೀಡ್ತಿವೆ ನಮ್ಮ ರಾಜ್ಯದಲ್ಲಿ ಇದು ಕೇವಲ ಆರಂಭ, ಇನ್ನೂ ಕೂಡ ಊಹೆ ಮಾಡಲಾಗದಷ್ಟು ಕೊರೊನಾ ಸೋಂಕಿತರು ಪತ್ತೆಯಾಗ್ತಾರೆ, ಬಿ ರೆಡಿ ಅಂತಾ ಎಚ್ಚರಿಕೆ ಕೊಡ್ತಿದ್ದಾರೆ. ಹೀಗೆ ತಜ್ಞರ ತಂಡಗಳು ಕೊಟ್ಟಿರೋ ವರದಿಯನ್ನಿಟ್ಟುಕೊಂಡೇ ಮಾಧ್ಯಮಗಳು ವರದಿ ಮಾಡ್ತಿದೆ ಬಿಟ್ರೆ, ಎಲ್ಲೋ ಸಿಕ್ಕ ಗಾಸಿಪ್ ಸುದ್ದಿಗಳನ್ನ ಇಟ್ಕೊಂಡ್ ಜನರನ್ನ ಹೆದರಿಸ್ತಿಲ್ಲ, ಬದಲಾಗಿ ಎಚ್ಚರಿಕೆಯ ಸಂದೇಶವನ್ನ ನೀಡ್ತಿವೆ ಅನ್ನೊಂದಂತೂ ಸತ್ಯ.

ಇನ್ನೂ ಇದೇ ವೇಳೆಯಲ್ಲಿ ಮತ್ತೊಂದು ಮಾತು ಕೂಡ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಭಾರೀ ಸದ್ದು ಮಾಡ್ತು. ಹೃದಯಾಘಾತವಾಗುವ 100 ಮಂದಿಯಲ್ಲಿ ಅವರೇಜ್ 10 ಮಂದಿ ಸಾವನ್ನಪ್ಪುತ್ತಾರೆ. ಆದ್ರೆ ಅದೇ ಕೊರೊನಾ ಬಂದಿರೋ 100 ಮಂದಿಯಲ್ಲಿ ಇಬ್ಬರಿಂದ ಮೂವರಷ್ಟೇ ಸಾಯ್ತಾರೆ. ಆದ್ರೂ ಮಾಧ್ಯಮದವರು ಅದನ್ನೇ ದೊಡ್ಡದು ಅನ್ನೋ ಹಾಗೆ ತೋರಿಸ್ತಾರೆ ಅನ್ನೋದು. ಆದ್ರೆ ನೆನಪಿರಲಿ, ಹೃದಯಾಘಾತ ಒಬ್ಬರಿಂದ ಒಬ್ಬರಿಗೆ ಹರಡಲ್ಲ. ಅದು 100 ಮಂದಿಯಲ್ಲಿದ್ರೆ ಅವರಲ್ಲಿ ಮಾತ್ರ ಇರುತ್ತೆ. ಆದ್ರೆ ಅದೇ ಕೊರೊನಾ 100 ಮಂದಿಯಲ್ಲಿದ್ರೆ, 100 ಮಂದಿ ಸಾವಿರಾರು ಜನರ ಜೊತೆ ಗೊತ್ತಿಲ್ಲದೇ ಕಾಂಟೆಕ್ಟ್ ಗೆ ಬಂದ್ರೆ ಎಷ್ಟು ಜನರಿಗೆ ಕೊರೊನಾ ಹರಡಬಹುದು ಅನ್ನೋದನ್ನ ಊಹಿಸಿದ್ದೀರಾ..? ಸದ್ಯ ಇದೇ ನಮ್ಮಲ್ಲಿ ಆಗ್ತಿರೋದು ಮೊದಲಿಗೆ ಒಬ್ಬಿಬ್ಬರಲ್ಲಿ ಇದ್ದ ಕೊರೊನಾ ಇಂದು ಹಳ್ಳಿ ಹಳ್ಳಿಗೂ ವ್ಯಾಪಿಸಿರೋದು.

ಯೆಸ್, ಮೇಲೆ ಹೇಳಿರುವ ಅಂಶಗಳನ್ನ ನೀವು ಸರಿಯಾಗಿ ಅರ್ಥಮಾಡಿಕೊಂಡ್ರೆ ಕೊರೊನಾ ಹೇಗೆ ತನ್ನ ಕಬಂಧಬಾಹುವನ್ನ ದೇಶದಲ್ಲಿ ಚಾಚ್ತಿದೆ ಅನ್ನೋದು ನಿಮಗೆ ತಲೆಗೆ ಹೋಗೋದ್ರಲ್ಲಿ ಖಂಡಿತಾ ಅನುಮಾನವೇ ಇಲ್ಲ.

ಇನ್ನೂ ಸಾಯುವವರು ಎಲ್ಲರೂ ವಯಸ್ಸಾದವರು, 50 ದಾಟಿದವರು. ಎಲ್ಲವನ್ನೂ ಅನುಭವಿಸಿದವರು, ಪ್ರಪಂಚವನ್ನ ನೋಡಿದವರು, ಉಸಿರಾಟ, ಶುಗರ್ ಬೇರೆ ಬೇರೆ ಸಮಸ್ಯೆಯಿಂದ ಬಳಲುತ್ತಿದ್ದವರು ಹೋಗ್ಲಿ ಬಿಡಿ ಅನ್ನೋ ಉಡಾಫೆ ಮಾತುಗಳನ್ನ ಕೇಳಿದ್ದೇವೆ. ಹೀಗೆ ಮಾತನಾಡುವವರು ಯಾರೂ ಕೂಡ ತಮ್ಮವರನ್ನ ಕಳೆದುಕೊಂಡವರಲ್ಲ. ಒಂದು ವೇಳೆ ಕಳೆದುಕೊಂಡಿದ್ರೆ ಈ ರೀತಿ ಅಲೋಚನೆ ಮಾಡ್ತಿರಲಿಲ್ಲ.

50ರ ಮೇಲೆ ಇರುವವರ ಪ್ರಾಣಕ್ಕೆ ಬೆಲೆಯಿಲ್ವಾ..? ಅವರದ್ದು ಕೂಡ ನಮ್ಮ ನಿಮ್ಮ ಹಾಗೆಯೇ ಒಂದು ಜೀವ ಅಲ್ವಾ..? ಸಾಮಾನ್ಯವಾಗಿ 50ರ ವಯಸ್ಸಿನ ತನಕ ಕುಟುಂಬದ ಕಷ್ಟ-ದುಃಖಗಳಿಗೆ ಹೆಗಲು ಕೊಡಲು ಆ ಜೀವ ಇಡೀ ಜೀವನವನ್ನೇ ಸವೆಸಿರುತ್ತೆ. ಇನ್ನೇನು ಮಕ್ಕಳು ವಯಸ್ಸಿಗೆ ಬಂದ್ರು, ಜವಾಬ್ದಾರಿ ಬಂದಿದೆ. ಇಲ್ಲಿವರೆಗೂ ಬೆವರು ಸುರಿಸಿ ಸಾಕಾಗಿ ಹೋಗಿದೆ ಅಂತಾ ನಿಟ್ಟುಸಿರು ಬಿಟ್ಟು ಇನ್ನಾದ್ರೂ ನೆಮ್ಮದಿಯ ಜೀವನ ನಡೆಸೋಣ ಅಂತಾ ಯೋಚಿಸುತ್ತಿರುವಾಗಲೇ ಅದೆಷ್ಟೋ ಜನರ ಜೀವವನ್ನ ಕೊರೊನಾ ಬಲಿ ತೆಗೆದುಕೊಂಡಿದೆ.

ಹೀಗೆ ಬಲಿ ತೆಗೆದುಕೊಂಡವರ ಅಂತ್ಯ ಸಂಸ್ಕಾರ ಹೇಗೆ ಆಗ್ತಿದೆ ಅಂತಾ ಗೊತ್ತಿದೆ ಅಲ್ವಾ..? ಪ್ರಾಣಿಗಳಿಗಿಂತಲೂ ಹೀನಾಯವಾಗಿ ಧರಧರನೇ ಎಳೆದುಕೊಂಡು ಹೋಗ್ತಿರೋದ್ನ, ಎಸೆದು ಗುಂಡಿಗೆ ಹಾಕ್ತಿರೋದ್ನ ಅದೆಷ್ಟೋ ಕಡೆಗಳಲ್ಲಿ ನೋಡಿದ್ದೀವಿ ಅಲ್ವಾ..? ಇದನ್ನ ಅವರ ಸಂಬಂಧಿಕರು ಹೇಗೆ ತಾನೇ ಸಹಿಸಿಕೊಳ್ಳಬೇಕು..? ಗೌರವದಿಂದ ಅಂತ್ಯಸಂಸ್ಕಾರ ನಡೆಸೋದು ಇರ್ಲಿ, ಕೊನೆಪಕ್ಷ ಮೃತಪಟ್ಟವರ ಮುಖ ನೋಡೋಕೂ ಕೂಡ ಕುಟುಂಬಸ್ಥರಿಗೆ ಅವಕಾಶವಿಲ್ಲ.

ಇದು ಗಂಭೀರವಾದ ರೋಗ ಅಲ್ವಾ..? ಹಾಗಾದ್ರೆ ಸರ್ಕಾರ ಯಾಕೆ ಇಷ್ಟೊಂದು ಸಿಕ್ರೇಟ್ ಆಗಿ ಅಂತ್ಯ ಸಂಸ್ಕಾರ ಮಾಡ್ಬೇಕು..? ತಲೆ ಕೆಟ್ಟಿದ್ಯಾ ಸರ್ಕಾರಕ್ಕೆ..? ಬೇರೆ ಯಾವ ಕಾಯಿಲೆ ಬಂದಾಗ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು ನೀವೇ ಹೇಳಿ ಫಾರ್ವರ್ಡ್ ಮೆಸೇಜ್ ರವಾನಿಸುವ ಶೂರರೇ. ಧೀರರೇ.?

ಇಂತ ಸಂಕಟದ ಪರಿಸ್ಥಿತಿಯನ್ನ ಎದುರಿಸ್ತಿರೋ ಅದೆಷ್ಟೋ ಜನರ ಕಣ್ಣೀರು ಹಲವರಿಗೆ ಇನ್ನೂ ಅರ್ಥವಾಗಿಲ್ಲ. ಇದನ್ನೇ ಮಾಧ್ಯಮ ಅರ್ಥಮಾಡಿಸ್ತಿರೋದು. ಕೊರೊನಾದಿಂದ ಸೋಂಕಿತರು ಎದುರಿಸ್ತಿರೋ ಸಮಸ್ಯೆಯನ್ನ, ಸೋಂಕಿತರೇ ತೋಡಿಕೊಂಡ ನೋವನ್ನ ತೋರಿಸ್ತಿರೋದು.

ಅಂಬ್ಯುಲೆನ್ಸ್ ಸಿಕ್ತಿಲ್ಲ, ಬೆಡ್ ಸಿಕ್ತಿಲ್ಲ, ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ತಿಲ್ಲ ಅಂತಾ ನರಳಾಟ ಅನುಭವಿಸ್ತಿರೋ ಜನರಿಗೆ ದನಿಯಾಗ್ತಿರೋದು ಮಾಧ್ಯಮಗಳು. ನಮ್ಮ ಸಮಸ್ಯೆಯನ್ನ ನೀವಾದ್ರೂ ಕೇಳಿ ಅಂದಾಗ ಅವರ ಪರವಾಗಿ ಮಾತನಾಡ್ತಿರೋದು ಮಾಧ್ಯಮಗಳು. ಹೀಗೆ ಬೆರಳೆಣಿಕೆ ಮಂದಿಯ ಆಕ್ರೋಶ, ನರಳಾಟ ಬೆಚ್ಚಗೆ ಕೂತ್ಕೊಂಡು ಮಾಧ್ಯಮಗಳನ್ನ ಅಣಕಿಸುವ ಮಂದಿಗೆ ಹೇಗೆ ತಾನೇ ಅರ್ಥವಾದೀತು.

ಇಲ್ಲಿ ಸೋಂಕಿತರನ್ನ ನಿರ್ಲಕ್ಷ್ಯ ಮಾಡುವ, ಅಗೌರವದಿಂದ ಕಾಣುವ ಕೆಲಸ ಮಾಧ್ಯಮದಿಂದ ಆಗ್ತಿಲ್ಲ. ಬದಲಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸೋಂಕಿತರನ್ನ ನಿರ್ಲಕ್ಷ್ಯ ಮಾಡ್ತಿರೋ ಸರ್ಕಾರವನ್ನ, ಅಧಿಕಾರಿಗಳನ್ನ ಎಚ್ಚರಿಸೋ ಕೆಲಸವನ್ನ ಮಾಧ್ಯಮಗಳು ಮಾಡ್ತಿವೆ.

ಯಾರಿಗೋ ಸೋಂಕು ತಗುಲಿದೆ ಅಂತಾ ಗೊತ್ತಾದಾಗ ಅವರಿಗೆ ಆಸ್ಪತ್ರೆಯಲ್ಲಿ ಸರಿಯಾಗಿ ನೋಡಿಕೊಳ್ತಿದ್ದಾರಾ..? ಏನಾದ್ರೂ ತೊಂದರೆ ಆಗಿದ್ಯಾ..? ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ ಹೇಗಿದೆ ಅನ್ನೋದನ್ನ ಎತ್ತಿ ತೋರಿಸಿದ್ದು, ಇಂದಿಗೂ ತೋರಿಸ್ತಾ ಇರೋದು ಮಾಧ್ಯಮಗಳೇ. ಸೋಂಕಿತರ ಹತ್ತಿರ ಖುದ್ದು ಹೋಗಿ ಸಮಸ್ಯೆ ಕೇಳಿದ್ದು ಇದೇ ಮಾಧ್ಯಮದವರೇ.. ಅದನ್ನ ಬಿಟ್ಟು ಸೋಂಕಿತ ನಮ್ಮ ಏರಿಯಾದಲ್ಲಿ ಇದ್ದಾನೆ ಅಂತಾ ತಿಳಿದಾಗ ಸಾವಾಸವೇ ಬೇಡ ಅಂತಾ ಆ ವ್ಯಕ್ತಿಯನ್ನ, ಸೋಂಕಿತ ವ್ಯಕ್ತಿಯ ಮನೆಮಂದಿಯನ್ನ ಅಸ್ಪೃಶ್ಯರಂತೆ ಕಂಡಿದ್ದು, ಕಾಣ್ತಿರೋದು ಮಾಧ್ಯಮದವರಲ್ಲ, ನೀವುಗಳೇ ಅಲ್ವಾ ಮಹನೀಯರೇ..?

ಇನ್ನೂ ಮಾಧ್ಯಮಗಳತ್ತ ಬೊಟ್ಟು ಮಾಡುವ “ಕೆಲ” ಖಾಸಗಿ ಆಸ್ಪತ್ರೆಯ ವೈದ್ಯರುಗಳು, ಸೋಂಕಿರುವ ವ್ಯಕ್ತಿಗಳನ್ನ ಬಿಡಿ, ಸ್ವಲ್ಪ ಹುಷಾರಿಲ್ಲ ಅಂತಾ ಯಾರಾದ್ರೂ ಹೋದ್ರೂ ಕೂಡ ದಾಖಲಿಸಿಕೊಳ್ಳಲು ಹಿಂದೇಟು ಹಾಕ್ತಿರೋದು ಗೊತ್ತಿರೋ ವಿಚಾರವಲ್ವಾ.? ಕೊರೊನಾ ಬಗ್ಗೆ ಜ್ಞಾನವಿರುವ ನಿಮಗೇಕೆ ಭಯ..? ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಚಿಕಿತ್ಸೆ ನೀಡಬಹುದು ಅಲ್ವಾ..? ಇಲ್ಲಾ ಆ ತರ ಚಾನ್ಸ್ ತಗೊಂಡು ಏನಾದ್ರೂ ಯಾರಿಗಾದ್ರೂ ಪಾಸಿಟಿವ್ ಬಂದ್ರೆ, ಕೊನೆಗೆ ಆಸ್ಪತ್ರೆಯನ್ನೇ ಸೀಲ್ ಡೌನ್ ಮಾಡ್ಬೇಕು.. ಕೆಲ ದಿನಗಳ ವ್ಯಾಪಾರ ಬಂದ್ ಆಗುತ್ತೆ ಅನ್ನೋ ಭಯ.. ನಮಗೇಕೆ ಊರ ಉಸಾಬರಿ ಅನ್ನೋ ಆತಂಕ.

ಹಾಗಂತ ಮಾಧ್ಯಮದವರು ಏನೂ ಪ್ರಶ್ನಾತೀತರಲ್ಲ, ಎಲ್ಲವನ್ನೂ ತಿಳಿದಿರುವ ಬ್ರಹ್ಮರಂತೂ ಖಂಡಿತ ಅಲ್ವೇ ಅಲ್ಲ. ಹಾಗಂತ ಕೊರೊನಾ ವಿಚಾರದಲ್ಲಿ ತೋರಿಸುತ್ತಿರೋ ವಿಚಾರಗಳನ್ನ ಇಟ್ಕೊಂಡು ಉಡಾಫೆ ತೋರಬೇಡಿ. ಕೊರೊನಾ ಡೆಡ್ಲಿ ವೈರಸ್ ಅಲ್ಲದಿದ್ರೂ ಗಂಭೀರವಾಗಿ ಪರಿಗಣಿಸಬೇಕಾಗಿರೋ ರೋಗವಂತೂ ಖಂಡಿತಾ ಹೌದು. ಮೊದಲು ಮಾಧ್ಯಮಗಳನ್ನ ಟೀಕೆ ಮಾಡೋದನ್ನ ಬಿಡಿ, ನಿಮ್ಮ ಜವಾಬ್ದಾರಿಗಳನ್ನ ಅರಿಯಿರಿ, ಏನೂ ಆಗಲ್ಲ ಅಂತಾ ಮೊಂಡುತನ ತೋರಿ ಪ್ರಪಂಚ ಪರ್ಯಟನೆ ಮಾಡೋದನ್ನ ನಿಲ್ಲಿಸಿ. ಮಾಧ್ಯಮಗಳನ್ನ ಹೀಯಾಳಿಸಿಕೊಂಡು ಗಟ್ಟಿಮುಟ್ಟಾಗಿರುವ ನೀವುಗಳು ಕೊರೊನಾ ಗೆಲ್ಲಬಲ್ಲಿರಿ, ಆದ್ರೆ ನಿಮ್ಮ ಬೇಜವಾಬ್ದಾರಿ ಇನ್ಯಾರದ್ದೋ ಪಾಪದವರ, ಅಮಾಯಕರ ಜೀವಕ್ಕೆ ಕಂಟಕವಾಗದಿರಲಿ.