ಚಿಕ್ಕಮಗಳೂರು : 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕ ಕೊರೊನಾ ಸೋಂಕಿಗೆ ಬಲಿ-ಆರೋಗ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ…

259
firstsuddi

ಚಿಕ್ಕಮಗಳೂರು : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ 32 ವರ್ಷದ ಯುವಕ ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಯುವಕನ ಸಾವಿಗೆ ಆರೋಗ್ಯ ಇಲಾಖೆಯೇ ನೇರ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ನಿವಾಸಿ 32 ವರ್ಷದ ಯುವಕ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಜುಲೈ 17 ರಂದು ಲಿಂಗದಹಳ್ಳಿಯ ವೃದ್ಧ ದಂಪತಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ದಂಪತಿಯನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 6 ದಿನಗಳ ಹಿಂದೆ ಮೃತ ಯುವಕನ ತಾಯಿ ಮೃತಪಟ್ಟಿದ್ದು, ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವೃದ್ಧ ದಂಪತಿಗೆ ಕೊರೊನಾ ದೃಢವಾದ ಬಳಿಕ ಆರೋಗ್ಯ ಇಲಾಖೆ ವಾರದ ಹಿಂದೆಯೇ ಕುಟುಂಬಸ್ಥರ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ವರದಿ ಬರಲು ತಡವಾಗಿದ್ದು, ಶನಿವಾರ ತೀವ್ರ ಅನಾರೋಗ್ಯಕ್ಕೀಡಾದ ಯುವಕನನ್ನು ಆಸ್ಪತ್ರೆಗೆ ಸೇರಿಸಲು ಭಾನುವಾರ ಬೆಳಿಗ್ಗೆಯಿಂದ ಆಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಬಂದಿದ್ದು ಮಧ್ಯಾಹ್ನ 1 ಗಂಟೆಗೆ. ಅಲ್ಲದೇ ಆಂಬುಲೆನ್ಸ್‍ನಲ್ಲಿ ವೆಂಟಿಲೇಟರ್ ಕೂಡಾ ಇರಲಿಲ್ಲ. ಹೀಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಯುವಕ ಮೃತಪಟ್ಟಿದ್ದು, ಯುವಕನ ಸಾವಿಗೆ ಆರೋಗ್ಯ ಇಲಾಖೆಯೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.