ಮೂಡಿಗೆರೆ : ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ…

279

ಮೂಡಿಗೆರೆ: ಕಾಂಗ್ರೆಸ್ ಭವನದಲ್ಲಿ ಇಂದು ಪ್ರದೇಶ ಕಾಂಗ್ರೆಸ್ ವತಿಯಿಂದ ಕಾರ್ಗಿಲ್ ಯುದ್ದಲ್ಲಿ ಮಡಿದ ವೀರ ಯೋಧರಿಗೆ ನುಡಿ ನಮನ ಹಾಗೂ ಕಾರ್ಗಿಲ್ ವಿಜಯೋತ್ಸವ 21 ನೇ ವರ್ಷಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ನಿವೃತ್ತ ಯೋಧ ನವೀನ್ ಅವರು, ಇಂದಿನ ಯುವಕರು ಹೆಚ್ಚಿನ ಆದಾಯ ಹಾಗೂ ಅಧಕಾರ ಇರುವ ಹುದ್ದೆಗಳತ್ತ ಹೆಚ್ಚೆಚ್ಚು ಆಸಕ್ತರಾಗುತ್ತಿದ್ದು, ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಎದೆಯೊಡ್ಡಿ ದೇಶಸೇವೆ ಮಾಡುವ ಹಾಗೂ ದೇಶ ರಕ್ಷಣೆ ಮಾಡುವಂಥಹ ಜವಾಬ್ದಾರಿಯುತ ಹುದ್ದೆ ಸೈನಿಕನ ಸ್ಥಾನವನ್ನು ಅಲಂಕರಿಸಲು ಮುಂದೆ ಬಾರದಿರುವುದು ದುಖಃಕರ ಸಂಗತಿ.. ಜಗತ್ತಿನಲ್ಲಿ ಪ್ರತೀ ಜೀವಿಗೂ ಹುಟ್ಟು ಸಾವು ಖಚಿತ. ಅದರಲ್ಲಿಯೂ ದೈಹಿಕವಾಗಿ ಸಮರ್ಥರಾದವರಿಗೆ ಯೋಧರಾಗಿ ಸೇವೆ ಸಲ್ಲಿಸುತ್ತ ವೀರ ಮರಣವನ್ನು ಪಡೆಯಲು ಕೆಲವೇ ಜನರಿಗೆ ಅವಕಾಶ ಸಿಗುತ್ತದೆ. ಯೋಧರಾಗಿ ಸೇವೆ ಸಲ್ಲಿಸಿ ಬಂದ ನಂತರದಲ್ಲಿಯೂ ಉತ್ತಮ ಹುದ್ದೆಗಳನ್ನು ಅಲಂಕರಿಸಬಹುದು. ಆದರೆ ಎಲ್ಲವನ್ನೂ ಕೂಡಲೇ ಅನುಭವಿಸಬೇಕು ಹಾಗೂ ದೇಶ ಸೇವೆಯ ಮೇಲಿನ ಅಭಿಮಾನ ಕಡಿಮೆಯಾಗುತ್ತಿರುವ ಮನೋಭಾವನೆಯಿಂದಾಗಿ ಸೇನೆಗೆ ಸೇರುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಆತಂಕಕಾರಿ ಎಂದರು.
ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ ಸುರೇಂದ್ರ ಅವರು, ದೇಶಕ್ಕಾಗಿ ತಮ್ಮ ಜೀವದ ಹಂಗು ತೊರೆದು ಮಳೆ, ಕೊರೆಯುವ ಛಳಿ, ಗಾಳಿ ಎನ್ನದೆ ಹಗಲಿರುಳೂ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಯೋಧರು ನಮ್ಮ ಹೆಮ್ಮೆ ಹಾಗೂ ಆಸ್ತಿ ಎಂದರು. ಸೈನಿಕರು ತಮ್ಮ ಕುಟುಂಬವನ್ನು ಬಿಟ್ಟು ವರ್ಷಾನುಗಟ್ಟಲೆ ಬಾರ್ಡರ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುತ್ತಾರೆ. ಕೇವಲ ಒಂದೆರೆಡು ದಿನ ನಮ್ಮ ಮನೆ ಮಂದಿಯನ್ನು ಬಿಟ್ಟು ಇರಲು ನಮ್ಮಿಂದ ಸಾಧ್ಯವಿಲ್ಲ ಅಂದಮೇಲೆ ಸೈನಿಕರÀ ತ್ಯಾಗವನ್ನು ಎಲ್ಲರೂ ಗೌರವದಿಂದ ಕಾಣಬೇಕು. ದೇಶದ ವಿಚಾರದಲ್ಲಿ ರಾಜಕೀಯ ಬಿಟ್ಟು ಒಗ್ಗಟ್ಟಿನಿಂದ ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದರು.
ನಂತರ ಮಾತನಾಡಿದ ಎನ್‍ಎಸ್‍ಯುಐ ತಾಲ್ಲೂಕು ಕ್ಷೇತ್ರ ಅಧ್ಯಕ್ಷ ದೀಕ್ಷಿತ್ ಕಣಚೂರು ಅವರು, ಇತ್ತೀಚಿನ ದಿನಗಳಲ್ಲಿ ಇತರ ಪಕ್ಷಗಳು ನಮ್ಮ ಸೈನಿಕರನ್ನು ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಪೀಳಿಗೆಯ ಯುವಕರು ಸೇನೆಗೆ ಸೇರಲು ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಕ್ಷ್ಮಣ್ ಅವರು ಮಾತನಾಡಿ, 60 ದಿನಗಳಷ್ಟು ದೀರ್ಘವಾಗಿ ನಡೆದ ಯುದ್ಧದಲ್ಲಿ ನಮ್ಮ ದೇಶ 527 ವೀರ ಯೋಧರನ್ನು ಕಳೆದುಕೊಂಡಿತು. ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನು ಆಚರಣೆ ಮಾಡುವುದರ ಮೂಲಕ ಯುವ ಜನತೆಗೆ ದೇಶಾಭಿಮಾನ ಹಾಗೂ ಯೋಧರ ಮಹತ್ವವನ್ನು ಸಾರಿ ಹೇಳಬೇಕಿದೆ. ಕನಸಿನಲ್ಲಿಯೂ ದೇಶದ ಬಗೆಗಿನ ಅಪಮಾನವನ್ನು ದೇಶದ ಯುವಜನತೆ ವಿರೋಧ ಮಾಡುವಂಥಹ ಮನಸ್ಥಿತಿಗೆ ಯುವಕರು ತಲುಪಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯೆ ಹಂಜ್ಹಾ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಧ್ಯಕ್ಷರಾದ ಕಡಿದಾಳ್ ಬ್ರಿಜೇಶ್, ಮುಖಂಡರುಗಳಾದ ಸಿ.ಬಿ.ಶಂಕರ್, ನಿಶಾಂತ್ ಪಟೇಲ್, ಆದರ್ಶ, ದೀಕ್ಷಿತ್ ಕಣಚೂರು, ಮುಗ್ರಹಳ್ಳಿ ಸಂಪತ್, ಷಣ್ಮುಗಾನಂದ, ಅಹಮದ್ ಬಾವಾ, ಶಿವಸಾಗರ್, ರುದ್ರೇಶ್ ಮಗ್ಗಲಮಕ್ಕಿ, ತೇಜಸ್ವಿ, ಬದ್ರುದ್ದೀನ್, ಚಂದ್ರು ಒಡೆಯರ್, ಹೆಸಗಲ್ ರವಿ, ಮಾಡ್ಕಲ್ ಪ್ರಕಾಶ್, ಮತ್ತಿತರರು ಭಾಗವಹಿಸಿದ್ದರು.