ಚಿಕ್ಕಮಗಳೂರು : ದೇವಾಲಯಗಳ ಪಾವಿತ್ರ್ಯವನ್ನು ಉಳಿಸುವ ಕೆಲಸವಾಗಬೇಕು ಎಂದು ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಸಲಹೆ ಮಾಡಿದರು.
ತಾಲ್ಲೂಕಿನ ಚಿಕ್ಕಗೌಜದಲ್ಲಿ 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಗ್ರಾಮ ದೇವತೆ ಶ್ರೀ ರಾಮಾಂಜನೇಯಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಾಲಯವನ್ನು ಬುಧವಾರ ಲೋಕಾರ್ಪಣೆ ಮಾಡಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವಾಲಯಗಳು ನಮ್ಮ ಪರಂಪರೆಯ ಪ್ರತೀಕ, ಅವು ನಮ್ಮ ಇತಿಹಾಸವನ್ನು ಸಾರುತ್ತವೆ, ದೇವಾಲಯಗಳಿಗೆ ತೆರಳುವುದರಿಂದ ಮಾನಸಿಕ ಶಾಂತಿ, ನೆಮ್ಮದಿ, ಆತ್ಮವಿಶ್ವಾಸ ಮೂಡುತ್ತದೆ, ದೇವಾಲಯಗಳನ್ನು ಕಟ್ಟಿದರಷ್ಟೇ ಸಾಲದು ಉತ್ತಮ ನಿರ್ವಹಣೆ ಮಾಡುವ ಮೂಲಕ ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ನಿರ್ಮಾಣ ಆರಂಭವಾದ ದಿನವೇ ಚಿಕ್ಕಗೌಜದಲ್ಲಿ ಶ್ರೀ ರಾಮಾಂಜನೇಯಸ್ವಾಮಿಯ ದೇವಾಲಯ ಲೋಕಾರ್ಪಣೆಗೊಳ್ಳುತ್ತಿರುವುದು ಸ್ಮರಣೀಯವಾಗಿದೆ ಎಂದರು.
ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು, ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ದೇವಾಲಯ ಸಮಿತಿಯ ಕಾರ್ಯಾಧ್ಯಕ್ಷ ಸಿ.ಆರ್.ಮಾಸ್ತೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಉದ್ಘಾಟನೆ ಅಂಗವಾಗಿ ದೇವಾಲಯದಲ್ಲಿ ಹೋಮ ಹವನ ವಿಶೇಷ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಜರುಗಿದವು, ಶ್ರೀ ಶಿವಾನಂದಪುರಿ ಸ್ವಾಮೀಜಿ ಗೋಪುರದ ಕಳಸಾರೋಹಣ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ತಾ.ಪಂ. ಸದಸ್ಯ ಎಸ್.ಬಿ.ಮಲ್ಲೇಗೌಡ, ಗ್ರಾ.ಪಂ.ಅಧ್ಯಕ್ಷ ಶಂಕರೇಗೌಡ, ಕಾಂತರಾಜು, ಗ್ರಾಮದ ಮುಖಂಡ ಬಸವೇಗೌಡ, ದೇವಾಲಯ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಸಿ.ಎಸ್.ದೇವೇಗೌಡ, ಉಪಾಧ್ಯಕ್ಷರಾದ ಸಿ.ಆರ್.ನಾಗೇಗೌಡ, ಸಿ.ಎಂ.ಅಣ್ಣೇಗೌಡ, ಸಿ.ಎಂ.ತಿಮ್ಮೇಗೌಡ, ಪರಮೇಶ್ವರಪ್ಪ, ಸಾಹಿತಿ ರವೀಶ್ ಬಸಪ್ಪ ಉಪಸ್ಥಿತರಿದ್ದರು.