ಶ್ರೀನಗರ : ಗಡಿಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಮಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಉಗ್ರರ ಗುಂಡಿನ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರಾದ ಪುಲ್ವಾಮಾ ಜಿಲ್ಲೆಯ ಕಾಮ್‍ರಾಝಿಪೊರ ಬಳಿಯ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿದ ಯೋಧರು ಇಂದು ಬೆಳಗ್ಗಿನ ಜಾವ ಕಾರ್ಯಾಚರಣೆಗೆ ಇಳಿದಿದ್ದರು. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದರು. ಗಾಯಗೊಂಡಿದ್ದ ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಓರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಮೃತ ಉಗ್ರನ ಬಳಿ ಇದ್ದ ಎಕೆ ರೈಫಲ್ ಹಾಗೂ ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










