ಮೂಡಿಗೆರೆ : ಅಂಗಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ…

320
firstsuddi

ಮೂಡಿಗೆರೆ : ಅಂಗಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತವಾಗಿ ಎರಡನೇ ಬಾರಿಗೆ ಶೇ.100 ರಷ್ಟು ಫಲಿತಾಂಶ ಬಂದಿದ್ದು ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ನಿಮಿತ್ತ ಬುಧವಾರದಂದು ಕನ್ನಡ ಸಾಹಿತ್ಯ ಪರಿಷತ್, ಮೂಡಿಗೆರೆ ಸಂಘಟನೆ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಲೆಯಲ್ಲಿ ಶೇ.95.2 ಫಲಿತಾಂಶ ಪಡೆದು ಪಾಸಾದ ವಿದ್ಯಾರ್ಥಿನಿ ಉಗ್ಗೇಹಳ್ಳಿ ಗ್ರಾಮದ ಕೃಷ್ಣಾಚಾರ್ ಹಾಗೂ ಶ್ರೀಮತಿ ರೇಣುಕಾ ಅವರ ಪುತ್ರಿ ಕು.ಸುಶ್ಮಿತಾ.ಯು.ಕೆ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಕ.ಸಾ.ಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿನಿ ಸುಶ್ಮಿತಾ ಅವರ ಫಲಿತಾಂಶ ಉತ್ತಮ ಭವಿಷ್ಯ ಕಣ್ಣಮುಂದೆ ಕಾಣುತ್ತಿದೆ. ಎಲ್ಲರೂ ಸರ್ಕಾರಿ ಶಾಲೆ ಎಂದರೆ ಮೂಗು ಮುರಿದು ಖಾಸಗಿ ಶಾಲೆಗಳತ್ತ ಮಾತ್ರ ಗಮನ ನೀಡುತ್ತಿದ್ದಾರೆ. ಇನ್ನು ಮುಂದಾದರೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆಯನ್ನು ಮನಗಂಡು ಸರ್ಕಾರಿ ಶಾಲೆಗಳ ಮಹತ್ವವನ್ನು ಪೋಷಕರು ಅರಿತು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಂಗಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಎದುರಿಸಿದ ಒಟ್ಟು 14 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿಯೂ, 7 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಓರ್ವ ವಿದ್ಯಾರ್ಥಿನಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿಯೂ ಶಾಲೆಯ 4 ವಿದ್ಯಾರ್ಥಿಗಳು ಕನ್ನಡದಲ್ಲಿ 125 ಕ್ಕೆ 125 ಅಂಕಗಳನ್ನು ಗಳಿಸಿರುವುದು ಎಲ್ಲರ ಗಮನ ಸೆಳೆದಿದೆ.
ಅಭಿನಂದನಾ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಾಂತಕುಮಾರ್ ಹಾಗೂ ಸಹ ಶಿಕ್ಷಕರುಗಳು, ಕಸಾಪ ಗೌರವ ಕಾರ್ಯದರ್ಶಿ ಲಕ್ಷ್ಮಣ ಗೌಡ, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಅಶೋಕ್, ಗ್ರಾ.ಪಂ. ಪಿಡಿಓ ನಾಗರಾಜ್, ಶಾಲಾಭಿವೃದ್ಧಿ ಅಧ್ಯಕ್ಷ ಎ.ಡಿ.ರಾಜಶೇಖರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.