ರಾಯಚೂರು : ವಿದ್ಯತ್ ತಂತಿ ಸ್ಪರ್ಷಿಸಿ ತಂದೆ ಮಗ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದಿನ್ನಿ ಗ್ರಾಮದಲ್ಲಿ ನಡೆದಿದೆ. ಮಹೇಶ್(45), ನವೀನ್(16) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ರಾಯಚೂರಿನಲ್ಲಿ ನಿನ್ನೆಯಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಮಹೇಶ್ ಅವರ ಮನೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಇದರಿಂದ ವಿದ್ಯುತ್ ತಂತಿ ಪರಿಶೀಲಿಸಲು ಹೋಗಿದ್ದಾರೆ. ಈ ವೇಳೆ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಶಾಕ್ನಿಂದ ಮಹೇಶ್ ಅವರು ಮೃತಪಟ್ಟಿದ್ದು, ತಂದೆ ಬಿದ್ದಿರುವುದನ್ನು ಕಂಡು ಏನಾಯಿತು ನೋಡಲು ಹೋದ ಮಗನಿಗೆ ಕೂಡಾ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ನವೀನ್ನನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಪ್ರವಹಿಸಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಕುರಿತು ವಿಷಯ ತಿಳಿದ ಯರಗೇರಾ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










