ಚಿಕ್ಕಮಗಳೂರು : ಬೆಂಗಳೂರಿನಿಂದ ಆಲ್ದೂರಿಗೆ ಬಂದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರುಪಾಲಾಗಿದ್ದು, ಯುವಕ ನೀರು ಪಾಲಾಗುತ್ತಿದ್ದಂತೆ ಮೃತ ಯುವಕನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕ ಅನ್ವಿತ್ ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಲಾಕ್ಡೌನ್ ಹಿನ್ನೆಲೆ, ತನ್ನ ಸ್ವಗ್ರಾಮಕ್ಕೆ ಬಂದಿದ್ದು, ಬಳಿಕ ಬೆಂಗಳೂರಿಗೆ ಹೋಗಿರಲಿಲ್ಲ. ಆಲ್ದೂರಿನಲ್ಲೇ ಬಿಸ್ಲೆರಿ ವಾಟರ್ ಬಿಸಿನೆಸ್ ಹಾಗೂ ಓಮಿನಿ ಕಾರಿನಲ್ಲಿ ಬಾಡಿಗೆ ಹೊಡೆದು ಜೀವನ ಸಾಗಿಸುತ್ತಿದ್ದ ಯುವಕ ಬೆಂಗಳೂರಿನಿಂದ ಶಿಫ್ಟ್ ಕಾರಿನಲ್ಲಿ ಬಂದಿದ್ದ ನಾಲ್ಕು ಜನ ಸ್ನೇಹಿತರ ಜೊತೆ ಆಲ್ದೂರು ಸಮೀಪದ ಹಳ್ಳದಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದಾನೆ. ಆದರೆ ಮೃತ ಅನ್ವಿತ್ಗೆ ಈಜಲು ಬರುತ್ತಿರಲಿಲ್ಲ, ಆತ ನೀರಿಗೆ ಇಳಿದಿಲ್ಲ. ಬೆಂಗಳೂರಿನಿಂದ ಬಂದ ಯುವಕರೇ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









