ಮೂಡಿಗೆರೆ : ಬ್ರಹ್ಮಶ್ರೀ ನಾರಾಯಣ ಗುರು ಅವರ 166ನೇ ಜಯಂತೋತ್ಸವ ಆಚರಣೆ…

630
firstsuddi

ಮೂಡಿಗೆರೆ: ಜಾತ್ಯಾತೀತ ನೆಲೆಗಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಸಮಂಜಸ ಎಂದು ಮೂಡಿಗೆರೆ ತಹಸೀಲ್ದಾರ್ ಎಚ್.ಎಂ.ರಮೇಶ್ ಅವರು ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ 166ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗತ್ತಿನ ಅನೇಕ ಸಂಕಷ್ಟಗಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಅವರ ವಿಚಾರಧಾರೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವರು ಸಾರಿರುವ ಶಾಂತಿ, ನೆಮ್ಮದಿಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಸಾಮರಸ್ಯದಿಂದ ಸಾಗುವಂತಾಗುತ್ತದೆ. ಹಿಂದಿನ ಕಾಲದಲ್ಲಿ ಸಮಾಜ ಸುಧಾರಣೆ ಸಾಮಾನ್ಯವಾದ ವಿಚಾರವಾಗಿರಲಿಲ್ಲ. ಇಂಥಹ ಕ್ಲಿಷ್ಟಕರ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿ ಸಮಾಜಕ್ಕೆ ಮಾದರಿ. ಹಾಗಾಗಿ ಎಲ್ಲೆಡೆ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಆಚರಣೆಯಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಗೌರವಾಧ್ಯಕ್ಷ ಪ್ರವೀಣ್ ಪೂಜಾರಿ ಅವರು, ಹಿಂದೆ ಸಮಾಜ ಸುಧಾರಣೆಗಾಗಿ ಹೋರಾಟ ನಡೆಸಿದ್ದ ಅನೇಕ ಮಹನೀಯರ ಪೈಕಿ ಬ್ರಹ್ಮಶ್ರೀ ನಾರಾಯಣ ಗುರು ಕೂಡ ಒಬ್ಬರಾಗಿದ್ದರು. ಅವರು ಕೇವಲ ಒಂದು ವರ್ಗಕ್ಕೆ ಸೀಮಿತರಾಗಿಲ್ಲ. ಅವರು ಇಡೀ ಸಮಾಜದ ಆಸ್ತಿಯಾಗಿದ್ದರು. ದೇಶದಲ್ಲಿ ಅಸಮಾನತೆ ತಾಂಡವಾಡುತ್ತಿದ್ದ ಕಾಲದಲ್ಲಿ ಅವರು, ಹಿಂದುಳಿದ ಎಲ್ಲಾ ಸಮುದಾಯದ ಜನರು ಸ್ವಾಭಿಮಾನದಿಂದ ಬದುಕಬೇಕು, ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉತ್ತಮ ಸಮಾಜ ನಿರ್ಮಾಣವಾಗಬೇಕೆಂದು ಜಾತಿ, ಧರ್ಮ, ಬೇಧ, ಭಾವ ಮರೆತು ಸಮಾನತೆಯ ಕ್ರಾಂತಿ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಮನವಿ ಮಾಡಿದರು.

ಹೆಸಗಲ್ ಗ್ರಾ.ಪಂ. ಮಾಜಿ ಸದಸ್ಯ ಚಂದ್ರು, ಜಿಲ್ಲಾ ದೌರ್ಜನ್ಯ ಉಸ್ತುವಾರಿ ಸಮಿತಿ ನಿರ್ದೇಶಕ ಅಣ್ಣೇಗೌಡ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ತಾರನಾಥ್ ಪೂಜಾರಿ, ರವಿ ಪೂಜಾರಿ, ಅರುಣ ಪೂಜಾರಿ ಬಣಕಲ್, ತಾಲ್ಲೂಕು ಕಚೇರಿ ಸಿಬ್ಬಂದಿ ಗುರುರಾಜ್ ಹಾಲ್ಮಟ್ ಹಾಗೂ ಕಚೇರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.