ಚಿಕ್ಕಮಗಳೂರು : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ ಅವರ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದ ಬಳಿ ಧರಣಿ ನಡೆಸಿದ ಕಾರ್ಯಕರ್ತರು ವಿಧಾನಸಭಾ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ಎನ್.ಚೌಡಪ್ಪ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದರಿಂದ ಶೋಷಿತ ಸಮುದಾಯದ ಎಲ್ಲಾ ಒಳ ಜಾತಿಗಳಿಗೂ ಮೀಸಲಾತಿ ದೊರೆಯುತ್ತದೆ ಇದರಿಂದ ಅವುಗಳ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.
ಸರ್ವೋಚ್ಚ ನ್ಯಾಯಾಲಯ ಶಾಸನ ಸಭೆಗಳಿಗೆ ಪ.ಜಾತಿ ಮತ್ತು ಪ.ವರ್ಗಗಳ ಒಳ ಮೀಸಲಾತಿ ವರ್ಗೀಕರಣ ಮಾಡುವ ಅಧಿಕಾರವಿದೆ ಎಂದು ತೀರ್ಪು ನೀಡಿರುವುದರಿಂದ ಒಳ ಮೀಸಲಾತಿ ಜಾರಿಗೆ ತರಲು ಅನುಕೂಲವಾಗಿದೆ ಎಂದ ಅವರು ಹಾಗಾಗಿ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಕಛೇರಿಗೆ ಮನವಿ ಸಲ್ಲಿಸಲಾಯಿತು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವಿ.ಧರ್ಮೇಶ್, ಕೆ.ಸಿ.ವಸಂತಕುಮಾರ್, ಯಶೋಧರ, ಚಂದ್ರಪ್ಪ, ಸುರೇಶ್, ಪ್ರಶಾಂತ್, ಹೆಚ್.ಈ.ದೊಡ್ಡಯ್ಯ, ಇಲಿಯಾಜ್ ಅಹಮದ್, ಮೃತ್ಯುಂಜಯ, ಅಣ್ಣಪ್ಪ, ಕೃಷ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










