ಕಳಸ : ಕಳಸ ತಾಲ್ಲೂಕು ಕೇಂದ್ರವನ್ನು ಕೂಡಲೇ ಕಾರ್ಯಾರಂಭ ಮಾಡುವ ಬಗ್ಗೆ ಸಂಸದೆ ಶೋಭ ಕರಂದ್ಲಾಜೆಗೆ ಮನವಿ ಸಲ್ಲಿಸಲು ಹೋದಾಗ ಕಾರು ನಿಲ್ಲಿಸದೆ ಹೋಗಿದ್ದಾರೆ ಎನ್ನುವ ಆರೋಪ ಮಾಡಿ ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶಿಸಿದ ಜೆಡಿಎಸ್ ಕಾರ್ಯಕರ್ತರನ್ನು ಕಳಸ ಪೊಲೀಸರು ಬಂಧಿಸಿದರು.
ಕಳಸ ಹೋಬಳಿಯಾಧ್ಯಂತ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಲು ಇಂದು ಸಂಸದೆ ಶೋಭ ಕರಂದ್ಲಾಜೆ, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಆಗಮಿಸಿದ್ದರು. ಹೊರನಾಡು ದೇಗುಲದಲ್ಲಿ ಪೂಜೆ ಮುಗಿಸಿ ಕಳಸಕ್ಕೆ ಬರುವ ವೆಂಕಟರಮಣ ದೇವಸ್ಥಾನದ ಸಮೀಪ ಜೆಡಿಎಸ್ ಕಾರ್ಯಕರ್ತರು ಸಂಸದರಿಗೆ ಕಳಸ ತಾಲ್ಲೂಕು ಕೇಂದ್ರವನ್ನು ಕೂಡಲೇ ಕಾರ್ಯಾರಂಭ ಮಾಡಿಕೊಡಿ ಮತ್ತು ಅತಿವೃಷ್ಠಿ ಹಾನಿಗೊಳಗಾದವರಿಗೆ ಕೂಡಲೆ ಪರಿಹಾರವನ್ನು ಕೊಡಬೇಕು ಎನ್ನುವ ಮನವಿಯನ್ನು ಸಲ್ಲಿಸಲು 50ಕ್ಕೂ ಹೆಚ್ಚು ಕಾರ್ಯಕರ್ತರು ನಿಂತಿದ್ದರು.
ಆದರೆ ಅದೇ ಮಾರ್ಗವಾಗಿ ಬಂದ ಸಂಸದರು ತಮ್ಮ ವಾಹನವನ್ನು ನಿಲ್ಲಿಸದೆ ಹೋದಾಗ ಕೂಡಲೇ ಕಾರ್ಯಕರ್ತರು ರೊಚ್ಚಿಗೆದ್ದರು. ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಂಸದರ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ಮಿತಿ ಮೀರುತ್ತಿದ್ದಂತೆ ಕೂಡಲೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಳಸ ಪೊಲೀಸರು ಬಂಧಿಸಿದರು.
ಬಂದನಕ್ಕೊಳಕ್ಕಾದ ಕಾರ್ಯಕರ್ತರನ್ನು ಬಸ್ಸಿನಲ್ಲಿ ಠಾಣೆಯ ಸಮೀಪ ಕರೆದುಕೊಂಡು ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರು ನೂಕಾಟ ತಲ್ಲಾಟಗಳು ನಡೆದವು. ಕಾರ್ಯಕರ್ತರ ಕೈಯಲ್ಲಿದ್ದ ಕಪ್ಪು ಬಾವುಟಗಳನ್ನು ಪೊಲೀಸರು ವಶಪಡಿಸಿಕೊಂಡರು.
ಪೊಲೀಸ್ ಠಾಣಾ ಆವರಣದಲ್ಲಿಯೇ ಕೆಲ ಕಾಲ ಪ್ರತಿಭಟನೆ ನಡೆಸಿ ಮಂತ್ರಿಗಳ ನಡೆಯನ್ನು ತೀವೃವಾಗಿ ಖಂಡಿಸಿದರು. ಸಂಸದೆ ಶೋಭ ಕರಂದ್ಲಾಜೆ ನೂಜಿಯಲ್ಲಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ವಾಪಾಸ್ಸಾದ ನಂತರದಲ್ಲಿ ಬಂಧಿತರನ್ನು ಪೊಲೀಸರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಕಳಸ ತಾಲ್ಲೂಕು ಕೇಂದ್ರವನ್ನು ಮಾಡಲು ಬಿಜೆಪಿ ಸರಕಾರಕ್ಕೆ ಸಾದ್ಯವಾಗಲಿಲ್ಲ. ಆದರೆ ಜೆಡಿಎಸ್ ಕಾಂಗ್ರೇಸ್ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿದ್ದಾರೆ. ಆದರೆ ಇದಾಗಿ ಒಂದು ವರ್ಷ ಕಳೆದರೂ ಕೂಡ ತಾಲ್ಲೂಕು ಕೇಂದ್ರವನ್ನು ಕಾರ್ಯಾರಂಭ ಮಾಡಲು ಸಾದ್ಯವಾಗಲಿಲ್ಲ. ಈ ಬಗ್ಗೆ ಮನವಿಯನ್ನು ಕೂಡ ಪಡೆದುಕೊಳ್ಳಲು ಕೂಡ ಸಂಸದರು ಉದ್ದಟತನ ತೋರಿಸಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ ನಾವು ಯಾವುದೇ ಬಂಧನಕ್ಕೂ ಹೆದರಲ್ಲ ಇನ್ನು ಎಲ್ಲದಕ್ಕೂ ತಯಾರಾಗಿದ್ದೇವೆ. ಮುಂದಿನ ದಿನದಲ್ಲಿ ಕಳಸ ತಾಲ್ಲೂಕು ಕೇಂದ್ರದ ಕಾರ್ಯಾರಂಭಕ್ಕೆ ಒತ್ತಾಯಿಸಿ ಕಳಸ ಪಟ್ಟಣ ಬಂದ್ ಮಾಡುತ್ತೇವೆ. ಅಧಿಕಾರದಲ್ಲಿರುವ ಸಂಸದರ ಈ ನಡೆ ಸರಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರಾದ ದೇವರಾಜ್, ಹೋಬಳಿ ಅಧ್ಯಕ್ಷ ರತ್ನಾಕರ್, ಕಾರ್ಯದರ್ಶಿ ಬ್ರಹ್ಮದೇವ, ಮುಖಂಡರಾದ ರವಿ ರೈ, ಅನಿಲ್ ಡಿಸೋಜಾ, ಮಹಮ್ಮದ್ ರಫೀಕ್, ಜ್ವಾಲನಯ್ಯ, ಸಂತೋಷ್ ಹಿನಾರಿ, ಕೆ.ಜೆ.ಧರಣೇಂದ್ರ, ಪ್ರಸಾದ್, ಪ್ರಕಾಶ್ ಕುಮಾರ್, ಸುರೇಶ್, ಭಾಸ್ಕರ್ ಇತರರು ಇದ್ದರು.










