ಮೂಡಿಗೆರೆ : ತಾಲ್ಲೂಕಿನಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಬೀಸುತ್ತಿರುವ ರಣಗಾಳಿ ವೇಗಕ್ಕೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ಜಾವಳಿ ಸಮೀಪ ನಡೆದಿದೆ. ನಿನ್ನೆ ಬೆಳಿಗ್ಗೆಯಿಂದ ಮಳೆ ಪ್ರಮಾಣ ಕುಂಠಿತಗೊಂಡಿದೆ. ಆದರೆ ರಾತ್ರಿ ವೇಳೆ ಗಾಳಿಯ ಅಬ್ಬರ ಹೆಚ್ಚಾಗಿದೆ. ನಿನ್ನೆ ಸಂಜೆಯಿಂದ ಭಾರಿ ಗಾಳಿ ಬೀಸುತ್ತಿದ್ದು, ಬೀಸುತ್ತಿರುವ ರಣಗಾಳಿಯನ್ನು ಕಂಡು ಮನೆಯ ಒಳಗಡೆ ಇರುವುದಕ್ಕೂ ಹೆದರುವು ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾತ್ರಿಯಿಂದ ಗುತ್ತಿ, ಬಣಕಲ್, ಕೊಟ್ಟಿಗೆಹಾರ, ಗೌಡಹಳ್ಳಿ, ದಾರದಹಳ್ಳಿ, ಚಾರ್ಮಾಡಿ ಘಾಟ್, ಬಾಳೂರು, ನಿಡುವಾಳೆ, ಜಾವಳಿ ಬಳಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ. ಇದರಿಂದ ಸುಮಾರು 2 ಗಂಟೆಗಳ ಕಾಲ ಕೊಟ್ಟಿಗೆಹಾರ-ಜಾವಳಿ-ಕಳಸ-ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು. ರಾತ್ರಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಬಕ್ಕಿ ಗ್ರಾಮದ ಲಲಿತಮ್ಮ ಎಂಬುವವರ ಮನೆ ಸಂಪೂರ್ಣ ಹಾನಿಯಾಗಿದೆ. ಬೀಸುತ್ತಿರುವ ರಣಗಾಳಿ ಸ್ಥಳೀಯರಲ್ಲಿ ಮತ್ತೊಂದು ಆತಂಕ ತಂದೊಡ್ಡಿದೆ.










