ಚಿಕ್ಕಮಗಳೂರು : ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಬೃಹತೀ ನೂರಾರು ಭಕ್ತರ ನಡುವೆ ಸಹಸ್ರಯಾಗ…

184
firstsuddi

ಚಿಕ್ಕಮಗಳೂರು : ಅಧಿಕ ಮಾಸದ ಪ್ರಯುಕ್ತ ನಗರದ ಸುಗ್ಗಿಕಲ್ಲು ಸಮೀಪದ ಶ್ರೀ ಗುರು ರಾಘವೇಂದ್ರ ಯಜ್ಞಮಂಟಪದಲ್ಲಿ ಇಂದು ವಿಶೇಷ ಬೃಹತೀ ಸಹಸ್ರಯಾಗ ನೂರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.
ಯಾಗದ ಅಂಗವಾಗಿ ಬೆಳಿಗ್ಗೆ ಪುಣ್ಯಾಹ ವಾಚನ, ಕಂಕಣ ಬಂಧ, ವiಹಾ ಸಂಕಲ್ಪ, ಋತ್ವಿಗ್ವರಣ, ದೇವತಾ ಕಳಶ ಸ್ಥಾಪನೆ, ಪಾರಾಯಣ ನಡೆದವು.
ಮಧ್ಯಾಹ್ನ ಬೃಹತೀ ಸಹಸ್ರ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ ಜರುಗಿತು, ನಂತರ ಅವಭೃತ ಸ್ನಾನ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು, ಇದೇ ವೇಳೆ 33 ದಂಪತಿಗಳಿಗೆ ಪೂಜೆ ಸಲ್ಲಿಸಿ ವಸ್ತ್ರ, ಬಾಗಿನ, ಅಪೂಪ ದಾನ, ತುಳಸಿ ಗಿಡ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಅಶ್ವತ್ಥ ನಾರಾಯಣಾಚಾರ್ಯ ವಿ.ಜೋಷಿ ನಗರದಲ್ಲಿ ಇದೇ ಪ್ರಥಮ ಬಾರಿಗೆ ಬೃಹತೀ ಸಹಸ್ರಯಾಗ ನಡೆಸಲಾಗಿದ್ದು, ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಬೃಹತೀ ಸಹಸ್ರ ಮಂತ್ರಗಳು ಭಗವಂತನಿಗೆ ಬಹಳ ಪ್ರಿಯವಾದವು, ಬೃಹತೀ ಸಹಸ್ರ ಮಂತ್ರಗಳನ್ನು ಪಠಿಸುವುದರಿಂದ ಪರಮಾತ್ಮ ಆನಂದ ಪಡುತ್ತಾನೆ, ನೂರು ವರ್ಷಗಳ ಅಖಂಡ ಧ್ಯಾನದಿಂದ ಬರುವ ಪುಣ್ಯ ಈ ಯಾಗದಿಂದ ಲಭಿಸುತ್ತದೆ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ದೊರೆಯುತ್ತವೆ ಎಂದು ತಿಳಿಸಿದರು.
ಮುಂಬೈನ ವಿದ್ಯಾಪೀಠದ ಪಂಡಿತ ಜಯತೀರ್ಥಾಚಾರ್ ಬಾಳಗಾರ್ ನೇತೃತ್ವದ ಋತ್ವಿಕರ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತು. ಗರುಡಾಕೃತಿಯಲ್ಲಿ ನಿರ್ಮಿಸಲಾಗಿದ್ದ ಯಜ್ಞ ಮಂಟಪ ಸಾರ್ವಜನಿಕರ ಗಮನ ಸೆಳೆಯಿತು.