ಮುಂಬೈ : ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಸೇವೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದ ಬಾಲಿವುಡ್ ನಟ ಸೋನು ಸೂದ್ ಅವರ ಲೋಕೋಪಯೋಗಿ ಕಾರ್ಯಕ್ಕೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್‍ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.
ನಟ ಸೋನು ಸೂದ್ ಅವರು ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದೇ ತಮ್ಮ ಸ್ವಗ್ರಾಮಕ್ಕೂ ತೆರಳಲಾಗದೆ ಕಂಗೆಟ್ಟಿದ್ದ ಲಕ್ಷಾಂತರ ವಲಸೆ ಕಾರ್ಮಿಕರಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಬಸ್ ವ್ಯವಸ್ಥೆ ಮಾಡಿ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದರು. ಬಡಮಕ್ಕಳಿಗೆ ಶಾಲಾ ಶುಲ್ಕವನ್ನು ಪಾವತಸಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು. ಹಲವಾರು ಬಡಕುಟುಂಬಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದ್ದರು. ಸುಮಾರು 45 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸಿದ್ದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರದೊಂದಿ ಚರ್ಚಿಸಿ ವಲಸೆ ಕಾರ್ಮಿಕರನ್ನು ತಮ್ಮ ಸ್ವಗ್ರಾಮಕ್ಕೆ ಕಳುಹಿಸಲು ಅನುಮತಿಯನ್ನು ಪಡೆದುಕೊಂಡಿದ್ದರು. ಹೀಗೆ ನಟ ಸೋನು ಸೂದ್ ಅವರ ಹಲವಾರು ಇಂತಹ ಲೋಕೋಪಯೋಗಿ ಕಾರ್ಯಗಳನ್ನು ಗುರುತಿಸಿ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಪ್ರತಿಷ್ಠಿತ ಎಸ್‍ಡಿಜಿ ಪ್ರಶಸ್ತಿಯನ್ನು ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗಿದೆ.
ಪ್ರಶಸ್ತಿ ದೊರಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಸೋನು ಸೂದ್ ಅವರು, ವಿಶ್ವಸಂಸ್ಥೆ ನನ್ನ ಪ್ರಯತ್ನಗಳಿಗೆ ಬೆಂಬಲ ನೀಡಿದೆ. ನಾನು ನನ್ನ ದೇಶದ ಜನತೆಗೆ ಅನುಕೂಲವಾಗುವಂತಹ ಸ್ವಲ್ಪ ಕೆಲಸಗಳನ್ನು ಮಾಡಿದ್ದೇನೆ. ನನ್ನ ಈ ಕಾರ್ಯವನ್ನು ಗುರುತಿಸಿ ವಿಶ್ವಸಂಸ್ಥೆ ಪ್ರಶಸ್ತಿ ನೀಡಿರುವುದು ನಿಜಕ್ಕೂ ನನಗೆ ಬಹಳ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.










