ಬೀಜಿಂಗ್ : ಚೀನಾದ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದ ಮಹಿಳೆಯೊಬ್ಬರು ಲೈವ್ ವೀಡಿಯೋ ಮಾಡುತ್ತಿದ್ದಾಗಲೇ ಮಹಿಳೆಯ ಮಾಜಿ ಪತಿ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜನಪ್ರಿಯ ಟಿಬೆಟಿಯನ್ ವಿಡಿಯೋ ಬ್ಲಾಗರ್ ಆಗಿದ್ದ ಲಾಮು(30) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಮೀಣ ಬದುಕಿನ ಬಗ್ಗೆ ಹಾಗೂ ಲೈವ್ ಶೋ ಮಾಡುವ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಇದೇ ರೀತಿ ಕಳೆದ ಎರಡು ವಾರಗಳ ಹಿಂದೆ ತನ್ನ ಮನೆಯಲ್ಲಿ ಲೈವ್ ವೀಡಿಯೋ ಮಾಡುತ್ತಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮಾಜಿ ಪತಿ ಮನೆಯವರ ಮೇಲೆ ಹಲ್ಲೆ ಮಾಡಿ ಬಳಿಕ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಿಂದ ಶೇ. 90ರಷ್ಟು ಗಾಯಗಳಾಗಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 2 ವಾರಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.










