ಚಿಕ್ಕಮಗಳೂರು : ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಅವರ ಆದರ್ಶ ತತ್ವ ಮತ್ತು ಸಿದ್ಧಾಂತಗಳನ್ನು ಬಹುಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು.
ನಗರದ ಬಿಎಸ್ಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಸಂಸ್ಥಾಪಕ ಕಾನ್ಸಿರಾಮ್ ಅವರ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಧಿಕಾರಹೀನ ಬಹುಸಂಖ್ಯಾತರಿಗೆ ರಾಜಕೀಯವಾಗಿ ಹೊಸ ದಿಕ್ಕನ್ನು ತೋರಿಸಿದವರು ಕಾನ್ಸಿರಾಮ್. ಮೂಲತಃ ವಿಜ್ಞಾನಿಯಾಗಿದ್ದ ಅವರು ಶೋಷಿತರನ್ನು ರಾಜಕೀಯವಾಗಿ ಮೇಲೆತ್ತುವ ಉದ್ದೇಸದಿಂದ 1989ರಲ್ಲಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದರು ಎಂದರು.
ಕೇವಲ ಸೈಕಲ್ನಲ್ಲಿ ಸಾವಿರಾರು ಕಿ.ಮೀ.ನಷ್ಟು ದೂರ ಸಂಚರಿಸಿ ಬಹುಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದ ಕಾನ್ಸಿರಾಮ್ ಅವರು ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಿಂದ ಬಹುಜನರು ಹೊರಬಂದು ತಮ್ಮದೇ ಸರ್ಕಾರ ರಚಿಸಬೇಕು ಎಂದು ಪದೇ ಪದೇ ಪ್ರತಿಪಾದಿಸುತ್ತಿದ್ದರು ಎಂದು ತಿಳಿಸಿದರು.
ಓಟು ನಮ್ಮದು ಅಧಿಕಾರ ನಿಮ್ಮದು ಎಂಬ ಸಿದ್ದಾಂತ ಇನ್ನು ಮುಂದೆ ನಡೆಯುವುದಿಲ್ಲ ಮತವೂ ನಮ್ಮದು ಅಧಿಕಾರವೂ ನಮ್ಮದು ಎಂದು ಅವರು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಕಾನ್ಸಿರಾಮ್ ಅವರು ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಮಾತನಾಡಿ, ಕಾನ್ಸಿರಾಮ್ ಅವರ ಆಶಯದಂತೆ ಬಹುಸಂಖ್ಯಾತರು ಮುಂದಿನ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾನ್ಸಿರಾಮ್ ಅವರ ಭಾವಚಿತ್ರಕ್ಕೆ ಸಮಾರಂಭದಲ್ಲಿ ಪುಷ್ಪನಮನ ಸಲ್ಲಿಸಲಾಯಿತು. ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಸಂತ, ಉಪಾಧ್ಯಕ್ಷೆ ರೇಖಾ, ನಗರಾಧ್ಯಕ್ಷ ಹನುಮಂತರಾಯ, ಜಿಲ್ಲಾ ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜೋಸೆಫ್, ಪೀಟರ್, ಸುರೇಶ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಬಿಎಸ್ಪಿ ಸಂಸ್ಥಾಪಕ ಕಾನ್ಸಿರಾಮ್ ಅವರ ಸಿದ್ಧಾಂತಗಳನ್ನು ಬಹುಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು :...










