ಮೂಡಿಗೆರೆ : ಮೇಗೂರು, ಹೆಸಗೋಡು ಭಾಗದಲ್ಲಿ ಮಿತಿಮೀರಿದ ಕಾಡಾನೆ ಹಾವಳಿ-ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ…

323
firstsuddi

ಕೊಟ್ಟಿಗೆಹಾರ : ಮೇಗೂರು, ಹೆಸಗೋಡು, ಮಲೆಮನೆ, ಆಲೇಕಾನ್ ಹೊರಟ್ಟಿ, ಬಿದಿರುತಳ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಕಳೆದ ಕೆಲ ದಿನಗಳಿಂದ ಕಾಡಾನೆಗಳು ಬೆಳೆಹಾನಿ ಮಾಡುತ್ತಿರುವ ಘಟನೆಗಳು ಹೆಚ್ಚಾಗಿವೆ.
ಮೇಗೂರಿನ ರೈತರಾದ ಸುದೀರ್, ಜಯಂತ್, ನರೇಂದ್ರಗೌಡ, ಸುನೀಲ್,ದಿಲೀಪ್, ಸುರೇಶ್ ಎಂಬುವವರ ಕಾಫಿ, ಅಡಿಕೆ, ಕಾಳುಮೆಣಸಿನ ಬೆಳೆಗಳನ್ನು ತುಳಿದು ಹಾಕಿವೆ. ಬಿದಿರುತಳದ ಸತೀಶ್, ಹೆಸಗೂಡಿನ ರಾಹುಲ್ ಎಂಬುವವರ ಕಾಫಿ, ಅಡಿಕೆ, ಬಾಳೆ, ಏಲಕ್ಕಿ ಗಿಡಗಳನ್ನು ತುಳಿದು ನಜ್ಜುಗುಜ್ಜಾಗಿಸಿದೆ.

ಮೇಗೂರು ಗ್ರಾಮಸ್ಥ ಸುದೀರ್ ಮಾತನಾಡಿದ ಈ ಭಾಗದ ರೈತರು ಅತಿವೃಷ್ಟಿ, ನೆರೆಪ್ರವಾಹದಿಂದ ತೊಂದರೆ ಅನುಭವಿಸಿ ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದು ಅತಿಯಾದ ಮಳೆಯಿಂದ ಬೆಳೆಹಾನಿಯಾಗಿ ಅಳಿದುಳಿದ ಬೆಳೆಗಳನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗಲೇ ಕಾಡಾನೆ ಹಾವಳಿ ಮಿತಿ ಮೀರಿ ಉಳಿದ ಬೆಳೆಯೂ ಕೈಗೆ ಸಿಗದಂತಾಗಿದೆ. ಕಾಡಾನೆ ಹಾವಳಿ ಹೆಚ್ಚಾದಾಗ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುತ್ತಾರೆ. ಆದರೆ ಕಾಡಾನೆಗಳು ಮತ್ತೆ ಕೆಲದಿನಗಳಲ್ಲಿ ನಾಡಿನತ್ತ ಮುಖ ಮಾಡುತ್ತವೆ. ಆದ್ದರಿಂದ ಕಾಡಾನೆಗಳನ್ನು ಸ್ಥಳಾಂತರ ಮಾಡುವುದು ಸೇರಿದಂತೆ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕ್ರಮವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಉಪ ವಲಯ ಅರಣ್ಯಾಧಿಕಾರಿ ಶಿವರಾಜ್, ಮೇಗೂರು ಭಾಗದಲ್ಲಿ ಕಾಡಾನೆ ಹಾವಳಿ ಮಾಡಿದ್ದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಬೆಳೆ ಹಾನಿಯ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.