ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿಯೊಬ್ಬರು ತಮ್ಮ ಮನೆಗೆ ಧೋನಿ ಅವರ ಚಿತ್ರ ಹಾಗೂ ಮನೆ ಪೂರ್ತಿ ಹಳದಿ ಬಣ್ಣ ಹೊಡೆಸಿ ಧೋನಿ ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. ಚೆನ್ನೈನ ಕಡಲೂರು ಜಿಲ್ಲೆಯ ತಿಟ್ಟಕುಡಿ ಬಳಿಯ ಅರಂಗೂರ್ ಗ್ರಾಮದ ಆರ್. ಗೋಪಿಕೃಷ್ಣ ಎಂಬುವವರು ಧೋನಿ ಅಪ್ಪಟ ಅಭಿಮಾನಿಯಾಗಿದ್ದಾರೆ. ಈ ಬಾರಿ ಐಪಿಎಲ್ ಪಂದ್ಯಗಳು ನಡೆಯುತ್ತಿರುವ ದುಬೈನ ಕ್ರೀಡಾಂಗಣದ ಸಮೀಪದಲ್ಲೇ ಕೆಲಸ ನಿರ್ವಹಿಸುತ್ತಿದ್ದ ಗೋಪಿಕೃಷ್ಣನ್ ಅವರು ಕೊರೊನಾ ಲಾಕ್‍ಡೌನ್ ನಿಂದಾಗಿ ತಮಿಳುನಾಡಿನಲ್ಲಿ ಇರುವ ತಮ್ಮ ಮನೆಗೆ ಬಂದಿದ್ದರು. ಕೊರೊನಾ ಕಾರಣದಿಂದಾಗಿ ಐಪಿಎಲ್ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿಯಿಲ್ಲದ ಹಿನ್ನೆಲೆ, ತಮ್ಮ ಊರಿನಲ್ಲೇ ಉಳಿದುಕೊಂಡಿದ್ದರು. ಈ ವೇಳೆ ತಮ್ಮ ಮನೆಗೆ ಬಣ್ಣ ಹೊಡೆಸುವ ಕಾರ್ಯವನ್ನು ಇಟ್ಟುಕೊಂಡಿದ್ದ ಅವರು, ಈ ಬಾರಿ ಧೋನಿ ಅವರು ಐಪಿಎಲ್ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡದೇ ಸಾರ್ವಜನಿಕರ ಟೀಕೆಗೆ ಒಳಗಾಗುತ್ತಿದ್ದು, ಇದರಿಂದ ಧೋನಿ ಮೇಲೆ ತಮ್ಮ ಅಭಿಮಾನವನ್ನು ತೋರಿಸಬೇಕೆಂದು 1.5 ಲಕ್ಷ ರೂ. ಖರ್ಚು ಮಾಡಿ ಧೋನಿ ಅವರ ಚಿತ್ರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಲೋಗೋ ಸೇರಿ ಮನೆಗೆ ಹಳದಿ ಬಣ್ಣ ಹೊಡೆಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.











