ಮೂಡಿಗೆರೆ : ತಾಲೂಕಿನ ಕಿರುಗುಂದ ಗ್ರಾ.ಪಂ. ವ್ಯಾಪ್ತಿಯ ದಿಣ್ಣೇಕೆರೆ ಗ್ರಾಮದಲ್ಲಿ ಜಿ.ಪಂ. ಅನುದಾನದಲ್ಲಿ 6.5 ಲಕ್ಷ ವೆಚ್ಚದಲ್ಲಿ 50 ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆಯನ್ನು ಜಿ.ಪಂ. ಸದಸ್ಯೆ ಅಮಿತಾ ಮುತ್ತಪ್ಪ ನೆರವೇರಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಕುಡಿಯುವ ನೀರಿನ ಟ್ಯಾಂಕಿಯಿಂದ ಸುಮಾರು 70ಮನೆಗಳಿಗೆ ನೀರು ಪೂರೈಕೆಯಾಗುತ್ತದೆ. ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ದಿಣ್ಣೆಕೆರೆ ಗ್ರಾಮಕ್ಕೆ ಈಗಾಗಲೇ ವಿದ್ಯುತ್, ಸಮುದಾಯ ಭವನ, ಶೌಚಾಲಯ ಸೇರಿದಂತೆ ಅನೇಕ ಸೌಲಭ್ಯ ಒದಗಿಸಲಾಗಿದೆ. ಇಲ್ಲಿಗೆ ಇನ್ನೂ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯ ಒದಗಿಸಲು ಶಾಸಕರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಎಸ್.ರಘು ಮಾತನಾಡಿ, ಜನಪರ ಕೆಲಸ ಮಾಡುವಂತಹ ಜನಪ್ರತಿನಿಧಿಗಳನ್ನು ಈ ಭಾಗದ ಜನರು ಆಯ್ಕೆ ಮಾಡಿದ್ದರಿಂದ ಗ್ರಾಮದಲ್ಲಿ ಅಭಿವೃದ್ಧಿಗೆ ಕಾರ್ಯಗಳು ನಡೆಸಲು ಸಾಧ್ಯವಾಗುತ್ತಿದೆ. ಹಾಗಾಗಿ ಗ್ರಾಮಸ್ಥರು ಮುಂಬರುವ ಗ್ರಾ.ಪಂ. ಸಹಿತ ಎಲ್ಲಾ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಲು ಸಹಕರಿಸಬೇಕೆಂದು ಮನವಿ ಮಾಡಿದರು.
ಗೋಣಿಬೀಡು ಬಿಜೆಪಿ ಹೋಬಳಿ ಅಧ್ಯಕ್ಷ ಭರತ್ ಕನ್ನೇಹಳ್ಳಿ, ಕಿರುಗುಂದ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜಶೇಖರ್, ಜೆಡಿಎಸ್ ಮುಖಂಡ ರಘು, ಉದುಸೆ ಬೂತ್ ಅಧ್ಯಕ್ಷ ರವಿ, ರಾಜು ದಿಣ್ಣೆಕೆರೆ, ಮಹೇಶ್, ಪುಟ್ಟಸ್ವಾಮಿ, ಮುದ್ದಯ್ಯ, ಮೀನಾಕ್ಷಮ್ಮ, ನೇತ್ರ, ಕಲ್ಯಾಣಿ ಮತ್ತಿತರರು ಉಪಸ್ಥಿತರಿದ್ದರು.










