ರಾಜ್ಯದಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಬ್ಯಾನ್ : ಬಿ.ಎಸ್. ಯಡಿಯೂರಪ್ಪ.

176
firstsuddi

ಬೆಂಗಳೂರು : ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಬಿ.ಎಸ್. ಯಡಿಯೂರಪ್ಪ ಅವರು, ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ ಹಾಗೂ ಪಟಾಕಿ ಹಚ್ಚುವಂತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಶೀಘ್ರವೇ ಸರ್ಕಾರ ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದ್ದಾರೆ. ಇನ್ನೂ ಸರ್ಕಾರದ ನಿರ್ಧಾರದಿಂದ ಪಟಾಕಿ ಮಾರಾಟಾರರಿಗೆ ಮತ್ತು ಪಟಾಕಿ ಖರೀದಿಸಿದ್ದವರಿಗೆ ಶಾಕ್ ಉಂಟಾಗಿದೆ.

ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿರುವ ನಿರ್ಧಾರಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಸರವಾದಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಸಂಪ್ರದಾಯವಾದಿಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಪಟಾಕಿ ಸಿಡಿಸುವುದರಿಂದ ಪರಿಸರ ಹಾನಿ ಆಗುತ್ತದೆ ಎಂದರೆ ಪರಿಸರಕ್ಕೆ ಹಾನಿಯಾಗುವ ಎಲ್ಲವನ್ನೂ ನಿಷೇಧ ಮಾಡಿ ಎಂಬುವುದು ಸಂಪ್ರದಾಯವಾದಿಗಳ ವಾದವಾಗಿದೆ.

ಇದೇ ವೇಳೆ ರಾಜ್ಯ ಉಪಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಯಿಸಿದ ಅವರು, ಎರಡೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ. ನಾನು ಹೇಳಬೇಕಾದರೆ ನೂರಕ್ಕೆ ನೂರು ಲೆಕ್ಕಾಚಾರ ಹಾಕಿಯೇ ನಾನು ಹೇಳುವುದು. ನಾವು ಇದುವರೆಗೆ ಹೇಳಿದ್ದು ಯಾವುದು ಸುಳ್ಳಾಗಿಲ್ಲ. ಫಲಿತಾಂಶ ಬರಲಿ ಎಂದು ಕಾಯುತ್ತಿದ್ದೇವೆ. ಫಲಿತಾಂಶ ಬಂದ ಬಳಿಕ ದೂರವಾಣಿ ಕರೆ ಮೂಲಕ ಸಂಪರ್ಕ ಮಾಡಿ ಸಂಪುಟ ವಿಸ್ತರಣೆ ಮಾಡಬಹುದಾ ಎಂದು ಕೇಳುತ್ತೇನೆ. ಇಲ್ಲದಿದ್ದರೆ ನ. 11ರಂದು ದೆಹಲಿಗೆ ಹೋಗಿ ಬರುವುದಾಗಿ ತಿಳಿಸಿದರು.