ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇನ್ನು 24 ರಿಂದ 30 ತಿಂಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ : ಡಾ. ಕೆ. ಸುಧಾಕರ್.

227
firstsuddi

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇನ್ನು 24 ರಿಂದ 30 ತಿಂಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಹಾಗೂ ಕಾಲೇಜು ಕಟ್ಟಡ ನಿರ್ಮಾಣ ಕುರಿತು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇನ್ನು 24 ರಿಂದ 30 ತಿಂಗಳಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಡಿಸೆಂಬರ್ ನಲ್ಲಿ ಗೊತ್ತು ಪಡಿಸಲಾಗುತ್ತದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಟ್ಟಡ ವಿನ್ಯಾಸ ಉತ್ತಮವಾಗಿದ್ದು, ಕೆಲವು ಬದಲಾವಣೆಗಳಿಗೆ ಸೂಚಿಸಲಾಗಿದೆ. 400ಕ್ಕೂ ಹೆಚ್ಚು ಹಾಸಿಗೆ ಇರುವ ಈ ವೈದ್ಯಕೀಯ ಕಾಲೇಜಿನ ಜೊತೆಗೆ 200 ಹಾಸಿಗೆಯ ತಾಯಿ-ಶಿಶುವಿನ ಆಸ್ಪತ್ರೆ ನಿರ್ಮಾಣವಾಗಲಿದೆ. ಮುಂದಿನ ಜೂನ್ ವೇಳೆಗೆ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು. ಹಾಗಾಗಿ ತಾತ್ಕಾಲಿಕ ಕಟ್ಟಡ ಗುರುತಿಸಲಾಗಿದ್ದು, ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಸ್ಥಳಾಂತರಿಸಲಾಗುತ್ತದೆ. ಜೊತೆಗೆ ಎನ್ಎಂಸಿ ನಿಯಮದಂತೆ, 3 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಒಂದು ನಗರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

ಇದೇ ವೇಳೆ ಕೋವಿಡ್ ಕುರಿತು ಪ್ರತಿಕ್ರಯಿಸಿದ ಅವರು, ಜಿಲ್ಲೆಯಲ್ಲಿ ದಿನಕ್ಕೆ 1,900 ಕೋವಿಡ್ ಪರೀಕ್ಷೆ ನಿಗದಿಪಡಿಸಿದ್ದು, ಇದಕ್ಕೂ ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯಲ್ಲಿ ಕೋವಿಡ್ ಗೆ ಮರಣ ಹೊಂದುತ್ತಿರುವವರ ಪ್ರಮಾಣ ಶೇ. 1.08 ರಷ್ಟಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಹೆಚ್ಚು ಜನರಿಗೆ ಚಿಕಿತ್ಸೆ ನಿಡಬೇಕಾಗಿ ಸೂಚಿಸಲಾಗಿದೆ ಎಂದರು.