ಮೂಡಿಗೆರೆ : ರೈತ ಭವನದ ಕಟ್ಟಡದ ಮೇಲೇರಿ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ…

1268
firstsuddi

ಮೂಡಿಗೆರೆ : ರೈತ ಭವನದ ಕಟ್ಟಡದ ಮೇಲೇರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮೂಡಿಗೆರೆಯಲ್ಲಿ ನಡೆದಿದೆ.
ಮೂಡಿಗೆರೆ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿ ಅಧ್ಯಕ್ಷ ಮಗ್ಗಲಮಕ್ಕಿ ಲಕ್ಷ್ಮಣಗೌಡ ಎಂಬುವವರೇ ಈ ಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಲಕ್ಷ್ಮಣಗೌಡ ಅವರು ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೈತ ಭವನ ನಿರ್ಮಾಣ ಕಾಮಗಾರಿಯಲ್ಲಿ 30ಲಕ್ಷ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹಾಲಿ ಆಡಳಿತ ಮಂಡಳಿ ಅಧ್ಯಕ್ಷರು ಸಮಿತಿಯ ಚುನಾವಣಾ ಸಂದರ್ಭದಿಂದಲೂ ಆರೋಪ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ವಿಚಾರವಾಗಿ ಸಭೆಯಲ್ಲಿ ಸ್ಪಷ್ಟೀಕರಣ ನೀಡಲು ಅವಕಾಶ ನೀಡುತ್ತಿಲ್ಲ. ನಾನು ಯಾವುದೇ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತ ನನ್ನ ತೇಜೋವಧೆ ಮಾಡುತ್ತಿದ್ದಾರೆ, ನನಗೆ ಅನ್ಯಾಯವಾಗುತ್ತಿದೆ ನನಗೆ ನ್ಯಾಯ ಬೇಕು ಎಂದು ಕಟ್ಟಡದ ಮೇಲಿನಿಂದಲೇ ಕೂಗಿ ಹೇಳುತ್ತಿದ್ದರು.
ಕಟ್ಟಡದ ಮೇಲೆ ನಿಂತಿದ್ದ ವ್ಯಕ್ತಿಯನ್ನು ಕೆಳಗೆ ಇಳಿಸಲು ಒಂದು ಗಂಟೆಗಳಿಗೂ ಹೆಚ್ಚು ಕಾಲ ರೈತ ಭವನದ ಕಟ್ಟಡದ ಮುಂದೆ ಸಾರ್ವಜನಿಕರು ಹರಸಾಹಸ ಪಟ್ಟರು. ನಂತರ ಕೊಣಗೆರೆ ಶಿವಕುಮಾರ್ ಅವರು ಅಗ್ನಿಶಾಮಕ ಸಿಬ್ಬಂದಿಗಳ ಸಹಕಾರದಿಂದ ಲಕ್ಷ್ಮಣಗೌಡ ಅವರ ಗಮನವನ್ನು ಬೇರೆಡೆಗೆ ಬರುವಂತೆ ಮಾಡಿ ಅವರನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು. ಈ ವಿಚಾರದ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.