ಕೊಟ್ಟಿಗೆಹಾರ:ಬಲ್ಲಾಳರಾಯನ ದುರ್ಗ ಸಮೀಪದ ರಾಣಿಝರಿಯ ಅರಣ್ಯ ಪ್ರದೇಶದಲ್ಲಿ ಕೆಲ ಪ್ರವಾಸಿಗರು ಫೈರ್ ಕ್ಯಾಂಪ್‍ನಲ್ಲಿ ತೊಡಗಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಣಿಝರಿ ಪ್ರಪಾತದ ಸಮೀಪ ಪ್ರವಾಸಿಗರು ರಾತ್ರಿ ಬಿಡಾರ ಹೂಡಿ ಬೆಂಕಿ ಹಾಕಿ ಫೈರ್ ಕ್ಯಾಂಪ್ ನಡೆಸಿದ್ದಾರೆ. ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಅರಣ್ಯವನ್ನು ಪ್ರವೇಶಿಸಲು ಅನುಮತಿ ಕಡ್ಡಾಯ. ಜೊತೆಗೆ ಅರಣ್ಯದಲ್ಲಿ ಬೆಂಕಿ ಹಾಕುವುದರಿಂದ ಅರಣ್ಯದಲ್ಲಿ ಬೆಂಕಿ ಹರಡಿ ಅರಣ್ಯ ನಾಶವಾಗುವ ಸಾಧ್ಯತೆಯೂ ಹೆಚ್ಚಿದೆ.
ಈ ಬಗ್ಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಚೇತನ್ ಗಸ್ತಿ, ಅರಣ್ಯ ಸಿಬ್ಬಂದಿಗಳು ಈ ಭಾಗದಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಆದರೂ ಕೂಡ ಕಿಡಿಗೇಡಿಗಳು, ಅರಣ್ಯ ಇಲಾಖೆಯ ಕಣ್ತಪ್ಪಿಸಿ ಅರಣ್ಯದಲ್ಲಿ ಫೈರ್ ಕ್ಯಾಂಪ್ ನಡೆಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.










