ಕಾವೇರಿ ತಂತ್ರಾಶದಲ್ಲಿ ಸಮಸ್ಯೆ : ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ…

233
firstsuddi

ಬೆಂಗಳೂರು : ರಾಜ್ಯದ ಬೊಕ್ಕಸಕ್ಕೆ ಗರಿಷ್ಠ ಆದಾಯ ತಂದುಕೊಡುವ ಇಲಾಖೆಗಳಲ್ಲಿ ಒಂದಾದ ನೋಂದಣಿ ಕಛೇರಿಗಳಲ್ಲಿ ನಿರ್ವಹಣೆ ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ.

ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶಕ್ಕೂ ಹಾಗೂ ಕಂದಾಯ ಇಲಾಖೆಯ ಭೂಮಿ ಮತ್ತು ಗ್ರಾಮ ಪಂಚಾಯಿತಿ ಇಲಾಖೆಯ ಆರ್.ಡಿ.ಪಿ.ಆರ್. ತಂತ್ರಾಂಶಕ್ಕೂ ಲಿಂಕ್ ಇದ್ದು, ಭೂಮಿ ಮತ್ತು ಆರ್.ಡಿ.ಪಿ.ಆರ್. ನಿಂದ ಸಂಪರ್ಕ ಸಿಗದೇ ತುಂಬಾ ತೊಂದರೆಯಾಗಿದೆ.

ನೋಂದಣಿ ಇಲಾಖೆಯು ತಂತ್ರಾಂಶ ಹಾಗೂ ಕಂಪ್ಯೂಟರ್ ಗಳ ನಿರ್ವಹಣೆಗೆ ಖಾಸಗಿ ಕಂಪನಿಯೂಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದವು ಒಂದೂವರೆ ವರ್ಷದ ಹಿಂದೆಯೇ ಮುಗಿದು ಹೋಗಿರುತ್ತದೆ. ಈಗ ಕಂಪ್ಯೂಟರ್ ಹಾಗೂ ತಂತ್ರಾಂಶದ ನಿರ್ವಹಣೆಗೆ ತಂತ್ರಜ್ಞರೇ ಇಲ್ಲದೇ ತೊಂದರೆಯಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊತ್ತುಗಳು ನೋಂದಣಿಯಾದಲ್ಲಿ ಗ್ರಾಮ ಪಂಚಾಯಿತಿಗೆ ಖಾತೆ ದಾಖಲು ಮಾಡಲು ನೋಂದಣಿ ಕಛೇರಿಯಿಂದ ಲಿಂಕ್ ಹೋಗಬೇಕಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ತಾಂತ್ರಿಕ ಸಮಸ್ಯೆ ಇರುತ್ತದೆ. ಇದರಿಂದಾಗಿ ನೋಂದಣಿ ಮಾಡಿಸಿಕೊಂಡವರು ಖಾತೆ ಮಾಡಿಸಿಕೊಳ್ಳಲಾಗದೇ ಪರದಾಡುವಂತಾಗಿದೆ.

ಈಗ ನೋಂದಣಿ ಕಛೇರಿಯಲ್ಲಿರುವ ಕಂಪ್ಯೂಟರ್ ಗಳು ಬಹಳ ಹಳೆಯದಾಗಿದ್ದು, ಈಗಿರುವ ತಂತ್ರಾಂಶಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. ನೀಡಲಾಗಿದ್ದ ಪ್ರಿಂಟರ್ ಗಳು, ಜೆರಾಕ್ಸ್ ಮೆಷಿನ್ ಗಳು ಕೆಟ್ಟುಕೂತಿವೆ. ಪ್ರಿಂಟರ್ ಗಳಿಗೆ ಬೇಕಾದ ಟೋನರ್ ಗಳನ್ನು ಸಹ ಇಲಾಖೆ ನೀಡುತ್ತಿಲ್ಲ.
ನೋಂದಣಿ ಕಛೇರಿಯಲ್ಲಿ ಪ್ರತಿ ದಿನಕ್ಕೆ ಸಾವಿರಾರು ಹಾಳೆಗಳ ಅವಶ್ಯಕತೆ ಇದ್ದು, ಇದನ್ನು ಸರ್ಕಾರವಾಗಲೀ, ವಹಿಸಿಕೊಂಡ ಏಜೆನ್ಸಿ ಕಂಪನಿಯಾಗಲಿ ಸರಬರಾಜು ಮಾಡುತ್ತಿಲ್ಲ.

ಈಗಿರುವ ಕಂಪ್ಯೂಟರ್ ಆಪರೇಟರ್ ಗಳಿಗೆ ಹಲವು ತಿಂಗಳುಗಳಿಂದ ಸಂಬಳವನ್ನೇ ನೀಡಿಲ್ಲ. ಯಾವುದೇ ಪತ್ರದ ನೋಂದಣಿಗೆ ಖರೀದಿದಾರರು, ಮಾರಾಟಗಾರರು ಹಾಗೂ ಸಾಕ್ಷಿಗಳ ಮೊಬೈಲ್ ಗೆ ಓ.ಟಿ.ಪಿ. ಬರುವುದು ಕಡ್ಡಾಯವಾಗಿದ್ದು, ಕೆಲವೊಂದು ವೇಳೆ ಗಂಟೆ ಹಾಗೂ ದಿನಗಟ್ಟಲೇ ಓ.ಟಿ.ಪಿ. ಬರದೇ ನೋಂದಣಿಗೆ ಬಂದವರು ವಾಪಾಸ್ಸು ಹೋಗಿರುವ ಉದಾಹರಣೆಗಳು ಇದೆ.

ನೋಂದಣಿಯಾದ ಪತ್ರಗಳನ್ನು ಹಾಗೂ ಮದುವೆಗಳನ್ನು ಪ್ರತಿ ದಿನವೂ ಸಿ.ಡಿ. ಗಳಲ್ಲಿ ದಾಖಲು ಮಾಡುವುದು ಕಡ್ಡಾಯವಾಗಿದ್ದು, ಪ್ರತಿ ದಿನಕ್ಕೆ ಕನಿಷ್ಠ 6-7 ಸಿ.ಡಿ.ಗಳ ಅವಶ್ಯಕತೆ ಇರುತ್ತದೆ. ಇದನ್ನು ಸಹ ಸರಬರಾಜು ಮಾಡುತ್ತಿಲ್ಲ.

ಸಹಕಾರ ಸಂಘಗಳಿಂದ ರೈತರಿಗೆ ಸುಲಭವಾಗಿ ಸಾಲಪತ್ರ ನೋಂದಣಿಗೆ ನಮೂನೆ-3 ರಲ್ಲಿ ಘೋಷಣಾ ಪತ್ರಗಳನ್ನು ನೋಂದಣಿಗೆ ಅವಕಾಶವಿದೆ. ಇದಕ್ಕೆ ರೈತರು ನೋಂದಣಿ ಕಛೇರಿಗೆ ಬರಬೇಕಾಗಿರುವುದಿಲ್ಲ. ಆದರೆ ಇದಕ್ಕೆ ಸಹ ಓ.ಟಿ.ಪಿ. ಬರುವುದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ.

ಕೆಲವು ನೋಂದಣಿ ಕಛೇರಿಯಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಯು..ಪಿ.ಎಸ್. ನಲ್ಲಿ ತೊಂದರೆಯಿದೆ. ಇಲಾಖೆಯಿಂದ ಸರಬರಾಜು ಮಾಡಲಾಗಿರುವ ಯು.ಪಿ.ಎಸ್. ಹಾಗೂ ಜನರೇಟರ್ ಗಳ ನಿರ್ವಹಣೆ ಇಲ್ಲದೇ ಬಹಳಷ್ಟು ಹಾಳಾಗಿರುತ್ತದೆ.

ಇದನ್ನೆಲ್ಲಾ ಸರಿಪಡಿಸದೇ ಆಸ್ತಿ ಮೌಲ್ಯವನ್ನು ಇನ್ನೂ ಶೇ. 20-30 ರಷ್ಟು ಹೆಚ್ಚಿಸಲು ಸರ್ಕಾರ ಹೊರಟಿರುವುದು ತಪ್ಪು.