ಹೊಸಪೇಟೆ : ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದ ಮಕ್ಕಳು ರಂಗ ಚಟುವಟಿಕೆಗಳತ್ತ ಆಸಕ್ತಿ ತೋರುವಂತೆ ಪೋಷಕರು ಸಹಕರಿಸಬೇಕು – ಕೆ. ನಾಗರತ್ನಮ್ಮ.

126
firstsuddi

ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ

ಹೊಸಪೇಟೆ : ಸರ್ಕಾರವು ಗ್ರಾಮೀಣ ಭಾಗದ ಮಕ್ಕಳಿಗೆ ರಂಗ ಚಟುವಟಿಕೆಗಳಲ್ಲಿನ ಪ್ರತಿಭೆಗೆ ಅನುಗುಣವಾಗಿ ಅವಕಾಶ ಹಾಗೂ ಪ್ರೋತ್ಸಾಹವನ್ನು ಕಲ್ಪಿಸುವ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕೆ. ನಾಗರತ್ನಮ್ಮ ಅವರು ಅಭಿಪ್ರಾಯಪಟ್ಟರು.
ಅವರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಗೆ ಸಮೀಪದ ಡಣಾನಾಯಕನಕೆರೆ ಕನ್ನೀರಮ್ಮ ದೇವಾಲಯದ ಆವರಣದಲ್ಲಿ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ತುಂಗಾ ಫೌಂಡೇಶನ್‍ನವರು ಹಮ್ಮಿಕೊಂಡಿದ್ದ ಕಲಾಸೌರಭ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.

ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದ ಮಕ್ಕಳು ಹಾಗೂ ಯುವಕರು ರಂಗ ಚಟುವಟಿಕೆಗಳತ್ತ ಆಸಕ್ತಿ ತೋರುವಂತೆ ಪೋಷಕರು ಸಹಕರಿಸಬೇಕು. ಟಿ.ವಿ ಚಾನಲ್‍ಗಳಲ್ಲಿ ನಗರ ಪ್ರದೇಶದ ಮಕ್ಕಳಿಗೆ ಅವಕಾಶಗಳು ದೊರೆಯುತ್ತವೆ. ಅದೇ ರೀತಿ ಗ್ರಾಮೀಣ ಭಾಗದ ಪ್ರತಿಭಾವಂತ ಆಸಕ್ತ ಮಕ್ಕಳಿಗೂ ಅವಕಾಶಗಳು ಸಿಗುವಂತಾದರೆ ಮಾತ್ರ ಮುಂದಿನ ಪೀಳಿಗೆಯಲ್ಲಿ ರಂಗ ಚಟುವಟಿಕೆಗಳು ಜೀವಂತವಾಗಿರಲು ಸಾಧ್ಯ ಎಂದರು. 
ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ರಂಗಭೂಮಿ ಕಲಾವಿದರು ಬದುಕು ಕಟ್ಟಿಕೊಳ್ಳಲು ಹಲವಾರು ಉಪಕಸುಬುಗಳನ್ನು ಹುಡುಕಿಕೊಂಡು ಜಯಿಸಿ ಮತ್ತೆ ರಂಗಭೂಮಿಯ ಸೇವೆಗೆ ಮರಳಿದ್ದಾರೆ. ಲಾಕ್‍ಡೌನ್‍ನ ಕೆಲ ನಿಯಮಗಳ ಸಡಿಲಿಕೆಯಿಂದ ನಾಟಕ ಪ್ರದರ್ಶನಗಳು ಪ್ರಾರಂಭವಾಗಿದ್ದು, ರಂಗಭೂಮಿಯನ್ನೇ ನಂಬಿದ್ದ ಕಲಾವಿದರು ಉಸಿರಾಡುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತೋಟಯ್ಯ ಸ್ವಾಮಿ ಅವರು ಮಾತನಾಡಿ, ತಮ್ಮ 50 ವರ್ಷಗಳ ರಂಗಭೂಮಿಯ ಜೀವನಾನುಭವಗಳನ್ನು ಹಂಚಿಕೊಂಡು ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ತೋಟಯ್ಯ ಸ್ವಾಮಿಯವರ ಕಲಾ ಸೇವೆ ಗುರುತಿಸಿ ತುಂಗಾ ಫೌಂಡೇಶನ್‍ನವರು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಟಿ ಶಾರದಮ್ಮ, ಮೃತ್ಯುಂಜಯ, ಅಂಬಳಿ ಚನ್ನಬಸಪ್ಪ, ಈಡಿಗರ ಶೇಷಪ್ಪ, ಟಿ ವೇಣುಗೋಪಾಲ್, ಜಿಲಾನ್ ಸಾಬ್, ಬಿ.ಎಂ ಚನ್ನಯ್ಯಸ್ವಾಮಿ, ಹೆಚ್.ನಾಗಪ್ಪ, ಡಿ.ಗುರುರಾಜ್, ಲಕ್ಷ್ಮಿ, ಗುಳೆಪ್ಪ ಹಾಗೂ ಇತರರು ಇದ್ದರು. ಕಾರ್ಯಕ್ರಮದ ನಂತರ ಸರದಾರ ಬಿ ನೀನಾಸಂ ನಿರ್ದೇಶಿತ ಪೌರಾಣಿಕ ಕಥಾ ನಾಟಕ “ಎಮ್ಮೊಳಗಿರ್ದನ್ ಏಕಲವ್ಯ” ನಾಟಕ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.