ಉಡುಪಿ : ರಂಗಸ್ಥಳದಲ್ಲಿ ಕುಣಿಯುತ್ತಿದ್ದ ವೇಳೆ ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎಂಬಲ್ಲಿ ಬೆಳಗಿನ ಜಾವ ನಡೆದಿದೆ. ಮೃತರನ್ನು ಮಂದಾರ್ತಿ ಮೇಳದಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಎಂದು ಗುರುತಿಸಲಾಗಿದೆ
ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಧು ಕೊಠಾರಿ ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಬೆಳಗಿನ ಜಾವ 3 ಗಂಟೆ ಸುಮಾರಿಗೆ ‘ಮಹಾಕಲಿ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನದಲ್ಲಿ ಕುಣಿಯುತ್ತಿದ್ದ ವೇಳೆ ರಂಗದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥರಾದರು.
ಕೂಡಲೇ ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಮೇಳದ ಮ್ಯಾನೇಜರ್ ಅವರ ವೇಷವನ್ನು ಕಳಚಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು ಆಸ್ಪತ್ರೆ ತಲುಪುವಾಗ ಮೃತಪಟ್ಟಿದ್ದಾರೆ.
ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಯಕ್ಷ ತಿರುಗಾಟ ನಡೆಸಿ ಬಡಗುತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು.










