ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸರ್ಕಾರಿ ಘನ ಬಸ್ ಸಂಚಾರ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗೆಳೆಯರ ಬಳಗದ ಸದಸ್ಯ ಸಂಜಯಗೌಡ ಅವರು, ಸರ್ಕಾರಿ ಬಸ್ ಸಂಚಾರ ಸಂಜೆ 6 ಗಂಟೆಯವರೆಗೆ ಮಾತ್ರ ಇರುವುದರಿಂದ ರಾತ್ರಿ ಸಮಯದಲ್ಲಿ ಚಾರ್ಮಾಡಿ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಗಿದೆ. ಮಂಗಳೂರಿನ ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಹಿಂದಿರುಗಲು ಸಂಜೆ 6 ರ ನಂತರ ಮಿನಿ ಬಸ್ ಸಂಚಾರ ಇಲ್ಲದೇ ಇರುವುದರಿಂದ ಖಾಸಗಿ ವಾಹನಗಳಿಗೆ ಸಾವಿರಾರು ರೂ ಬಾಡಿಗೆ ನೀಡಿ ಹಿಂದಿರುಗುವಂತಾಗಿದ್ದು, ಸರ್ಕಾರಿ ಘನ ವಾಹನ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಾರ್ಮಾಡಿ ಘಾಟ್ ರಸ್ತೆಯನ್ನು ಚಾರ್ಮಾಡಿ ಗ್ರಾಮದಿಂದ ಕೊಟ್ಟಿಗೆಹಾರದವರೆಗೆ ಡಾಂಬಾರೀಕರಣ ಮಾಡಲಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇಕ್ಕಟಾದ ತಿರುವುಗಳನ್ನು ಅಗಲೀಕರಣ ಮಾಡಿ ರಸ್ತೆ ಡಾಂಬಾರೀಕರಣ ಮಾಡಲಾಗಿದ್ದು, ಚಾರ್ಮಾಡಿ ಘಾಟ್ ಮಾರ್ಗವಾಗಿ ಸರ್ಕಾರಿ ಘನ ಬಸ್ ಸಂಚಾರ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಚಾರ್ಮಾಡಿ ಘಾಟ್‍ನಲ್ಲಿ 6 ತಡೆಗೋಡೆಗಳ ನಿರ್ಮಾಣ ಬಾಕಿ ಇದೆ. ಬಸ್ ಸಂಚಾರ ಆರಂಭಿಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಬಸ್ ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.










