ಚಿಕ್ಕಮಗಳೂರು : ಉತ್ತರ ಪ್ರದೇಶದಲ್ಲಿ ಅಂಗನವಾಡಿ ಸಹಾಯಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳನ್ನು ಗಲ್ಲಿಗೇರಿಸುವುದರ ಜೊತೆಗೆ ಅಲ್ಲಿನ ಸರ್ಕಾರವನ್ನು ವಜಾಗೊಳಿಸುವಂತೆ ಬಿಎಸ್‍ಪಿಯ ಜಿಲ್ಲಾ ಸಹೋದರತ್ವ ಸಮಿತಿ ರಾಷ್ಟ್ರಪತಿಯನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಅಂಗನವಾಡಿ ಸಹಾಯಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿರುವುದರ ಜೊತೆಗೆ ಅವರನ್ನು ತಲೆ ತಗ್ಗಿಸುವಂತೆ ಮಾಡಿದೆ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದಕ್ಕೆ ಅಲ್ಲಿನ ಸರ್ಕಾರ ನಿಷ್ಕ್ರಿಯವಾಗಿರುವುದೇ ಕಾರಣ ಎಂದು ಆರೋಪಿಸಿದರು.
ಅತ್ಯಾಚಾರ ಮತ್ತು ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗದಿರುವುದರಿಂದಾಗಿ ಅಂತಹ ಪ್ರಕರಣಗಳು ಹೆಚ್ಚುತ್ತಿವೆ ಹಾಗಾಗಿ ಅಂಗನವಾಡಿ ಸಹಾಯಕಿಯ ಹತ್ಯೆಗೈದಿರುವ ದೇವಾಲಯದ ಅರ್ಚಕ ಮತ್ತು ಆತನ ಸಹಚರರನ್ನು ಕೂಡಲೇ ಗಲ್ಲಿಗೇರಿಸಬೇಕು, ಉತ್ತರಪ್ರದೇಶ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಪದಾಧಿಕಾರಿಗಳಾದ ಕೆ.ಎಸ್.ಮಂಜುಳಾ, ಅರ್ಪಿತ, ಕುಮಾರಿ, ರೇಣುಕಾ, ರೇಖಾ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಅಂಗನವಾಡಿ ಸಹಾಯಕಿಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಬಿಎಸ್‍ಪಿ ಒತ್ತಾಯ..










