ಕಳಸ : ಅಡಕೆ ತುಂಬಿದ ಟ್ರ್ಯಾಕ್ಟರ್ ನ ಟ್ರೆಲರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಕಳಸದ ಕಗ್ಗನಳ್ಳ ಸಮೀಪ ಹೆರಟೆ ಎಂಬಲ್ಲಿ ನಡೆದಿದೆ. ಮೃತರಾದವರು ಕೊಪ್ಪ ತಾಲ್ಲೂಕಿನ ದಯಂಬಳ್ಳಿ ಗ್ರಾಮದ ನಾಗೇಶ್(35), ನರೇಶ್(32)ಎಂದು ಗುರುತಿಸಲಾಗಿದೆ.
ಹೊರನಾಡು ಗ್ರಾಮದಲ್ಲಿ ಅಡಕೆಯನ್ನು ಚೇನಿ ವಹಿಸಿಕೊಂಡಿದ್ದವರು ಹಸಿ ಅಡಕೆಯನ್ನು ಮೂಟೆ ಮಾಡಿ ಟ್ರಾಕ್ಟರ್ ನಲ್ಲಿ ತುಂಬಿಸಿಕೊಂಡು ಎನ್.ಆರ್.ಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ನಿನ್ನೆ ರಾತ್ರಿ ಸುಮಾರು 11ರ ಸಮಯದಲ್ಲಿ ಕಗ್ಗನಳ್ಳದ ಹೆರಟೆ ಎಂಬಲ್ಲಿ ತಿರುವಿನಲ್ಲಿ ಟ್ರಾಕ್ಟರ್ ನ ಟ್ರೇಲರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಟ್ರೇಲರ್ನ ಅಡಕೆ ಮೂಟೆಯ ಮೇಲ್ಗಡೆ ಕುಳಿತಿದ್ದ ನಾಲ್ವರಲ್ಲಿ ಇಬ್ಬರು ಮೂಟೆಯ ಅಡಿಗಡೆ ಸಿಕ್ಕಿಕೊಂಡಿದ್ದಾರೆ. ಅದರಲ್ಲಿ ಸ್ಥಳದಲ್ಲಿಯೇ ನರೇಶ ಮೃತರಾದರೆ, ನಾಗೇಶ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಇಬ್ಬರ ಮರಣೋತ್ತರ ಪರೀಕ್ಷೆಯನ್ನು ಇಂದು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ಮೃತದೇಹಗಳನ್ನು ವಾರಿಸುದಾರರಿಗೆ ಬಿಟ್ಟುಕೊಡಲಾಗಿದೆ. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.










