ಅರಕಲಗೂಡು (ಹಾಸನ): ಸೋಮವಾರಪೇಟೆಯಿಂದ ಸಂತೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಆನೆಯೊಂದು ದಾಳಿ ಮಾಡಿರುವ ಘಟನೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಮೃತ ಪಟ್ಟಿರುವ ವ್ಯಕ್ತಿ ರೇವಣ್ಣ (40) ಚಿಕ್ಕ ಬೊಮ್ಮನಹಳ್ಳಿ ಗ್ರಾಮದವನೆಂದು ಗುರುತಿಸಲಾಗಿದೆ.
ಸಂತೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಆನೆಯೊಂದು ರೇವಣ್ಣನ ಮೇಲೆ ದಾಳಿ ನಡೆಸಿದೆ. ಹಿಂಬದಿಯ ಸವಾರ ಕೂದಲೆಳೆ ಅಂತರದಿಂದ ಆನೆಯಿಂದ ಬಚಾವ್ ಆಗಿದ್ದು, ರೇವಣ್ಣ ಆನೆ ತುಳಿತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅರಕಲಗೂಡು ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










