ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ದೇಶದಾದ್ಯಂತ ಇಂದು ರಾಜ್ಯದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ಕರೆದಿದ್ದ (ಸಂಯುಕ್ತ ಕಿಸಾನ್ ಮೋರ್ಚಾ) ಹೆದ್ದಾರಿ ತಡೆಗೆ ಕರೆ ನೀಡಿದೆ.
ಬಜೆಟ್ನಲ್ಲಿ ರೈತರ ಬೇಡಿಕೆ ನಿರ್ಲಕ್ಷಿಸಲಾಗಿದ್ದು, ರೈತರ ಪ್ರತಿಭಟನೆ ಹತ್ತಿಕ್ಕಲು ಇಂಟರ್ನೆಟ್ ಸೇವೆ ರದ್ದುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಕೇಂದ್ರ ಸರ್ಕಾರಕ್ಕೆ ಉತ್ತರ ನೀಡಲು ಕಿಸಾನ್ ಮೋರ್ಚಾ ಹೆದ್ದಾರಿ ತಡೆ ಮಾಡುತ್ತಿವೆ. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ರೈತರು ತಮ್ಮ ಟ್ರ್ಯಾಕ್ಟರ್ಗಳನ್ನು ಹೆದ್ದಾರಿ ಪಕ್ಕದಲ್ಲಿ ತಂದು ನಿಲ್ಲಿಸಿದ್ದಾರೆ. ಇಂದು ಇದೇ ಟ್ರ್ಯಾಕ್ಟರ್ ಮೂಲಕ ಹೆದ್ದಾರಿ ತಡೆ ನಡೆಯಲಿದೆ.
ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರಾಜ್ಯದ ರೈತ ಸಂಘಟನೆಗಳು ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆಗಳನ್ನು ತಡೆಯದಂತೆ ನಗರ ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಹೆಚ್ಚಿನ ಪೊಲೀಸರನ್ನು ನಿಯೋಜಿಸಿ, ಮೈಸೂರು ರಸ್ತೆ, ತುಮಕೂರು ರಸ್ತೆ, ಕೆ.ಆರ್.ಪುರಂ ರಸ್ತೆಯಲ್ಲಿ ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸಿದ್ದಾರೆ. ಪ್ರತಿಭಟನೆ ತೀವ್ರಗೊಂಡರೆ ಸ್ಥಳದಲ್ಲಿ ಡಿಸಿಪಿಗಳೇ ಖುದ್ದು ರೈತರ ಮನವೊಲಿಸುವ ಪ್ರಯತ್ನಗಳನ್ನು ಮಾಡಬೇಕು. ಈ ವೇಳೆಯೂ ರೈತರ ಮನಸ್ಸು ಪರಿವರ್ತನೆಗೊಳ್ಳದೇ ಹೋದರೆ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಂತೆ ಹೇಳಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಪ್ರತಿಭಟನೆ..?
ಶಿವಮೊಗ್ಗ-ಚಿತ್ರದುರ್ಗ ರಾಜ್ಯ ಹೆದ್ದಾರಿ ತಡೆದು ಧರಣಿ ಮಾಡಲು ರೈತರು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದು, ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಲಿದೆ. ಹೆದ್ದಾರಿಯ ಮೇಲೆ ಸಸಿ ನೆಟ್ಟು ಹೋರಾಟ ನಡೆಸಲು ರೈತರು ನಿರ್ಧರಿಸಿದ್ದಾರೆ.
ರಾಯಚೂರು ನಗರದ ಹೊರ ವಲಯದ ಅಸ್ಕಿಹಾಳ ಬಳಿ ಹೆದ್ದಾರಿ ತಡೆ ನಡೆಸಲಾಗುತ್ತದೆ. ಲಿಂಗಸಗೂರ, ಮಾನವಿ, ಸಿಂಧನೂರ, ದೇವದುರ್ಗ ಹೆದ್ದಾರಿ ಬಂದ್ ಆಗಲಿವೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ 2 ಕಡೆ ರಸ್ತೆ ಬಂದ್ ಆಗಲಿದೆ.
ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಗೋವಾ, ಬೆಂಗಳೂರು-ಪುಣೆ, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಮಾಗಡಿ ರೋಡ್, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಗಳಿಗೆ ತಡೆ ಬೀಳಲಿದೆ.
ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 48, ರಂಗವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50, ಚಿತ್ರದುರ್ಗ ತಾಲೂಕಿನ ರಂಗವ್ವನಹಳ್ಳಿ ಬಳಿ ಹೆದ್ದಾರಿ, ಹೊಳಲ್ಕೆರೆಯ ಮುಖ್ಯ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ, ಹಿರಿಯೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 48, ನಾಯಕನಹಟ್ಟಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 150ಎ, ಚಳ್ಳಕೆರೆ ಪಟ್ಟಣದ ನಾಯಕನಹಟ್ಟಿ ಕ್ರಾಸ್, ಮೊಳಕಾಲ್ಮೂರು ತಾಲೂಕಿನ ಹಾನಗಲ್ ಬಳಿ ರೈತರು ಪ್ರತಿಭಟನೆ ಮಾಡಲಿದ್ದಾರೆಂದು ಎಂದು ತಿಳಿದುಬಂದಿದೆ.










