ಚಿಕ್ಕಮಗಳೂರು : ಸಾಹಿತಿ ಪ್ರೊ|| ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ನ್ಯಾಯವಾದಿಯನ್ನು ಬಂಧಿಸುವಂತೆ  ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದಿಂದ  ಸರ್ಕಾರಕ್ಕೆ ಒತ್ತಾಯ…

306
First Suddi

ಚಿಕ್ಕಮಗಳೂರು : ಪ್ರಗತಿಪರ ಸಾಹಿತಿ ಪ್ರೊ|| ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ನ್ಯಾಯವಾದಿಯನ್ನು ಬಂಧಿಸಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್ ಅವರನ್ನು  ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ಘಟನೆಯನ್ನು ಖಂಡಿಸಿದರು.
ನ್ಯಾಯವಾದಿ ಮೀರಾ ರಾಘವೇಂದ್ರ ಅವರು ತಮ್ಮ ವೃತ್ತಿ ಧರ್ಮವನ್ನು ಮರೆತು ಮೊಕದ್ದಮೆ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದ ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಅವಾಚ್ಯವಾಗಿ ನಿಂದಿಸುವುದರ ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಒಂದು ವೇಳೆ ಪ್ರೊ|| ಭಗವಾನ್ ಅವರು ತಪ್ಪು ಮಾಡಿದ್ದಲ್ಲಿ ನ್ಯಾಯವಾದಿ ಮೀರಾ ಅವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಿತ್ತು. ಅದನ್ನು ಬಿಟ್ಟು ಸ್ವತಃ ಕಾನೂನನ್ನು ಕೈಗೆತ್ತಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.
ಪ್ರೊ|| ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಅಪಮಾನ ಮಾಡುವುದರ ಜೊತೆಗೆ ದೈಹಿಕ ಹಲ್ಲೆ, ನಿಂದನೆ ಮತ್ತು ಬೆದರಿಕೆ ಹಾಕುವ ಮೂಲಕ ದೇಶದ ಸಂವಿಧಾನ ಮತ್ತು ಕಾನೂನಿಗೆ ಅಗೌರವ ತೋರಿರುವ ಮೀರಾ ರಾಘವೇಂದ್ರ ಅವರನ್ನು ತಕ್ಷಣ ಬಂಧಿಸಬೇಕು. ರಾಜ್ಯ ವಕೀಲರ ಪರಿಷತ್ ಮೀರಾ ಅವರ ವೃತ್ತಿಯ ಪರವಾನಗಿಯನ್ನು ರದ್ದುಪಡಿಸಬೇಕು, ಪ್ರೊ|| ಭಗವಾನ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಕಲಾವತಿ, ಜಿಲ್ಲಾ ಸಂಯೋಜಕ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಹಾಜರಿದ್ದರು.