ಕಳಸ : ಅರಮನೆ ಮಕ್ಕಿ ಮೈದಾನ ಮತ್ತು ಪ್ರವಾಸಿ ಕೇಂದ್ರವಾದ ಅಂಬಾ ತೀರ್ಥವನ್ನು ಮೂಡಬಿದ್ರೆಯ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಿದ್ಯಾರ್ಥಿಗಳ ಜೊತೆಗೂಡಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿ ಶನಿವಾರ ಸ್ವಚ್ಚಗೊಳಿಸಿದರು.
ಕಳೆದ ವಾರ ನಡೆದ ಕಳಸ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅರಮನೆ ಮಕ್ಕಿ ಮೈದಾನದಲ್ಲಿ ಸಂತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಈ ಸಂದರ್ಭದಲ್ಲಿ ಮೈದಾನ ತುಂಬಾ ಕಸದ ರಾಶಿ ತುಂಬಿಕೊಂಡಿತ್ತು.ಅಲ್ಲದೆ ಪ್ರವಾಸಿ ತಾಣ ಅಂಬಾ ತೀರ್ಥದಲ್ಲೂ ಪ್ರವಾಸಿಗರು ಬಂದು ತ್ಯಾಜ್ಯಗಳನ್ನು ಹಾಕಿ ಹೋಗಿದ್ದರು.ಇವೆರಡನ್ನು ಸ್ವಚ್ಚತೆ ಮಾಡಲು ಮೂಡಬಿದ್ರೆಯ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಿದ್ಯಾರ್ಥಿಗಳು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರು.
ದಿನವಿಡೀ ಸ್ವಚ್ಚತೆಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿದ್ದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ನಾವು ಎಲ್ಲೇ ಹೋದರೂ ಕೂಡ ಅಲ್ಲಿ ನಾವು ಸ್ವಚ್ಚತೆಯ ಕಡೆ ಗಮನಕೊಡಬೇಕು.ನಮ್ಮನ್ನು ನೋಡಿ ಇನ್ನೊಬ್ಬರು ಕಲಿಯುವಂತಿರಬೇಕು ಈ ದಿನ ದೂರದ ಊರಿನ ವಿದ್ಯಾರ್ಥಿಗಳು ನಮ್ಮ ಊರಿನ ಸ್ಥಳಗಳನ್ನು ಸ್ವಚ್ಚತೆ ಮಾಡಲು ಕೇಳಿಕೊಂಡು ಇಲ್ಲಿಯ ಪರಿಸರದ ಸ್ವಚ್ಚತಾ ಕಾರ್ಯಕ್ಕೆ ಇಳಿದಿರುವುದು ನಮಗೆ ಕುಷಿಕೊಟ್ಟಿದೆ.ಅಲ್ಲದೆ ಇವರ ಜೊತೆ ನಾವು ಕೂಡ ಊರಿನ ಒಳ್ಳೆಯ ಕಾರ್ಯದಲ್ಲಿ ಬಾಗವಹಿಸಿದ್ದು ಹೊಸ ಅನುಭವವನ್ನು ತಂದಿದೆ.ಈ ಬಾಗದಲ್ಲಿರುವ ಹೆಚ್ಚಿನ ಸಂಘ ಸಂಸ್ಥೆಗಳು ಕೂಡ ಇದೇ ರೀತಿ ಒಂದು ಭಾಗದ ಪ್ರವಾಸಿ ತಾಣಗಳ ಸ್ವಚ್ಚತೆಗೆ ಕೈಜೋಡಿಸಿದರೆ ಪಂಚಾಯಿತಿಗೂ ಆರ್ಥಿಕ ಹೊರೆಯ ಬಾರ ಕಡಿಮೆಯಾಗುತ್ತದೆ.ಪರಿಸರವೂ ಸ್ವಚ್ಚತೆ ಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್,ಸದಸ್ಯ ಭಾಸ್ಕರ್ ಹಾಗೂ ಮಹಾವೀರ ಕಾಲೇಜಿನ ಆಡಳಿತ ವರ್ಗ ವಿದ್ಯಾರ್ಥಿಗಳು ಇದ್ದರು.










