ಚಿಕ್ಕಮಗಳೂರು : ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಪಾತ್ರರಾದ ಎಂ.ಆರ್.ಬಸಪ್ಪ ಅವರಿಗೆ ಸನ್ಮಾನ…

202
Firstsuddi

ಚಿಕ್ಕಮಗಳೂರು : ಕಲೆಯನ್ನು ಜನ ಆಸ್ವಾದಿಸಿ ಪ್ರೋತ್ಸಾಹಿಸಿದರೆ ಅದೇ ಕಲಾವಿದರಿಗೆ ಬಹುದೊಡ್ಡ ಸನ್ಮಾನ ಎಂದು ಹಿರಿಯ ವೀರಗಾಸೆ ಕಲಾವಿದ ಎಂ.ಆರ್.ಬಸಪ್ಪ ಹೇಳಿದರು.

ಕರ್ನಾಟಕದ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ಗೆ ಪಾತ್ರರಾದ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ನಿನ್ನೆ ಸ್ವಗೃಹದಲ್ಲಿ ನೀಡಿದ ಅಭಿನಂದನೆ ಮತ್ತು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಲಾವಿದರಿಗೆ ದೊರೆಯುವ ಪ್ರಶಸ್ತಿಗಳು, ಸನ್ಮಾನಗಳು, ಹಾರ ತುರಾಯಿಗಳು ಅವರಿಗೆ ತೃಪ್ತಿ ನೀಡುವುದಿಲ್ಲ, ಜನ ಅವರ ಕಲೆಯನ್ನು ವೀಕ್ಷಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ ಮಾತ್ರ ಅವರಿಗೆ ಸಂತೋಷವಾಗುತ್ತದೆ, ಅವರ ಕಲೆ ಸಾರ್ಥಕತೆ ಪಡೆಯುತ್ತದೆ ಎಂದು ಕಿವಿಮಾತು ಹೇಳಿದರು.

ಜಾನಪದ ಜಗತ್ತಿನ ಎಲ್ಲಾ ಸಾಹಿತ್ಯ, ಕಲೆ ಮತ್ತು ಸಂಸ್ಕøತಿಯ ಮೂಲ ಬೇರು ಅದನ್ನು ನಾವು ಕಳೆದುಕೊಂಡರೆ ನಮ್ಮ ತನವನ್ನು ಕಳೆದುಕೊಂಡು ನಾವು ವಿಶ್ವದೆದುರು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಇಂದಿನ ಯುವಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕು, ಪಾಶ್ಚಾತ್ಯ ಸಂಸ್ಕøತಿಯ ವ್ಯಾಮೋಹದಿಂದ ಹೊರಬಂದು ಜಾನಪದವನ್ನು ಉಳಿಸಿ ಬೆಳೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ವೀರಗಾಸೆ ಕಲೆಯ ಭೀಷ್ಮ, ಹಿರಿಯ ಕಲಾವಿದ ಎಂ.ಆರ್.ಬಸಪ್ಪ ಅವರಿಗೆ ಲಭಿಸಿರುವ ಗೌರವ ಡಾಕ್ಟರೇಟ್ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಲಕ್ಷ್ಮೀದೇವಮ್ಮ, ಮಾಜಿ ಸದಸ್ಯ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಉಪಸ್ಥಿತರಿದ್ದರು.