ಚಿಕ್ಕಮಗಳೂರು : ಶಿಕ್ಷಕರು ದೇಶದ ಆಧಾರಸ್ತಂಭಗಳು : ಅಶೋಕ್ ಕುಮಾರ್ ಶೆಟ್ಟಿ.

755
Firstsuddi

ಚಿಕ್ಕಮಗಳೂರು : ಶಿಕ್ಷಕರು ದೇಶದ ಆಧಾರಸ್ತಂಭಗಳು. ಅವರು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದು ಟೀಚರ್ಸ್ ಕೋ ಅಪರೆಟೀವ್ ಬ್ಯಾಂಕ್‍ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ನಗರದ ಟೀಚರ್ಸ್ ಕೋ ಅಪರೆಟೇವ್ ಬ್ಯಾಂಕ್‍ನಲ್ಲಿ ಗ್ರಾಹಕರ ದಿನಾಚರಣೆ ಪ್ರಯುಕ್ತ ಇಂದು ಸೇವೆಯಿಂದ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಅರ್ಪಣಾ ಮನೋಭಾವದಿಂದ ಶಿಕ್ಷಕರು ಪಾಠ ಮಾಡಿದರೆ ವಿದ್ಯಾರ್ಥಿಗಳು ಶಿಕ್ಷಣವಂತರಾಗುತ್ತಾರೆ. ಆ ಮೂಲಕ ದೇಶದ ಪ್ರಗತಿಯಾಗುತ್ತದೆ ಎಂದರು.

ನಿವೃತ್ತಿ ನಂತರ ಮನೆಯಲ್ಲಿ ಸುಮ್ಮನೆ ಕೂರಬಾರದು ಅದರ ಬದಲಿಗೆ ಆರೋಗ್ಯದ ದೃಷ್ಟಿಯಿಂದ ಯಾವುದಾದರೂ ಪ್ರವೃತ್ತಿಯಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬ್ಯಾಂಕ್‍ನಲ್ಲಿ ಋಣ ಪರಿಹಾರ ನಿಧಿ ಯೋಜನೆಯನ್ನು ಆರಂಭಿಸಿದ್ದು, ಅದರ ಪ್ರಕಾರ ಅಪಘಾತದಲ್ಲಿ ಮೃತಪಟ್ಟ ಗ್ರಾಹಕರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಬ್ಯಾಂಕಿನ ಉಪ ಮಹಾ ಪ್ರಬಂಧಕ ಮಂಜುನಾಥ್ ಶೆಟ್ಟಿ ಮಾತನಾಡಿ, ಚಿಕ್ಕಮಗಳೂರು ಶಾಖೆಯಿಂದ ಇದುವರೆಗೆ 42 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಸೇವಯಿಂದ ನಿವೃತ್ತಿ ಹೊಂದಿದ ಶಿಕ್ಷಕರಾದ ಎಚ್.ಎನ್. ಹನುಮಂತಪ್ಪ, ಎ.ದಾಕ್ಷಾಯಿಣಿ ಮತ್ತು ಸರೋಜಮ್ಮ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಪಘಾತದಲ್ಲಿ ಮೃತಪಟ್ಟ ಗ್ರಾಹಕ ಎ.ಎನ್.ಕೋಟೇಶ್ ಅವರ ಪತ್ನಿ ಎಸ್.ಅಶ್ವಿನಿ ಅವರಿಗೆ ಐದು ಲಕ್ಷ ರೂ. ಪರಿಹಾರದ ಚೆಕ್ ನೀಡಲಾಯಿತು.

ಬ್ಯಾಂಕ್‍ನ ವ್ಯವಸ್ಥಾಪಕ ರವೀಂದ್ರ ಶೆಟ್ಟಿ, ಗೌತಮ್, ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ. ಪಾಲಯ್ಯ ಉಪಸ್ಥಿತರಿದ್ದರು.