ಬೆಂಗಳೂರು : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು , ಇದರಿಂದಾಗಿ ಇಂದು ರಾಜ್ಯ ರಸ್ತೆ ಸಾರಿಗೆ ಬಸ್ ಗಳು ರಸ್ತೆಗಿಳಿಯಲ್ಲ. ಜನರು ದಿನನಿತ್ಯದ ವಹಿವಾಟುಗಳಿಗೆ, ಬಸ್ ಗಳನ್ನೇ ನಂಬಿಕೊಂಡಿದ್ದು, ಇದೀಗ ಬಸ್ ಗಳಿಲ್ಲದೇ ಪರದಾಡುವಂತಾಗಿದೆ.
ರಾಜ್ಯದಲ್ಲಿ ಪ್ರತಿದಿನ ಸುಮಾರು 20 ಸಾವಿರ ಸಾರಿಗೆ ಬಸ್ಸುಗಳು ಓಡಾಡುತ್ತಿದ್ದು, ಸುಮಾರು 1 ಕೋಟಿ ಪ್ರಯಾಣಿಕರು ಬಸ್ಸುಗಳನ್ನು ನೆಚ್ಚಿಕೊಂಡು ಪ್ರಯಾಣ ಮಾಡುತ್ತಿದ್ದರು. ಆದರೆ ಇಂದು ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವುದರಿಂದ ಸಾರಿಗೆ ಬಸ್ಸುಗಳು ಇಲ್ಲದ ಕಾರಣ ಅನಿವಾರ್ಯವಾಗಿ ಖಾಸಗಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಖಾಸಗಿ ಬಸ್ಸುಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ದರ ಸುಲಿಗೆ ಮಾಡುತ್ತಿರುವುದು ಕಂಡುಬರುತ್ತಿದೆ. ಬೇರೆ ಮಾರ್ಗವಿಲ್ಲದ ಕಾರಣ ಜನರು ದುಪ್ಪಟ್ಟು ಹಣ ನೀಡಿ ಪ್ರಯಾಣ ಮಾಡುತ್ತಿದ್ದಾರೆ.
ಮುಷ್ಕರದ ನಡುವೆಯೂ ಇಂದು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬಿಎಂಟಿಸಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನಮಗೆ 3 ತಿಂಗಳು ಸಂಸ್ಥೆ ವೇತನ ಕೊಟ್ಟು ಅನ್ನ ಹಾಕಿದೆ. ಸಾರ್ವಜನಿಕ ಸಾರಿಗೆಯಾಗಿರುವುದರಿಂದ ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಂದ ಚಾಲಕ ತ್ಯಾಗರಾಜ್ ಎನ್ನುವವರಿಗೆ ಸನ್ಮಾನ ಮಾಡಲಾಗಿದೆ.










