ಚಿಕ್ಕಮಗಳೂರು :ಕೊರೊನಾ ಸೋಂಕಿತರ ನೆರವಿಗೆ ಮುಂದಾದ ಯುವಕಾಂಗ್ರೆಸ್…

159

ಚಿಕ್ಕಮಗಳೂರು : ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಯುವಕಾಂಗ್ರೆಸ್ ಮತ್ತು ಬ್ಲಾಕ್ ಯುವಕಾಂಗ್ರೆಸ್ ಪದಾಧಿಕಾರಿಗಳು ಸೋಂಕಿತರ ನೆರವಿಗೆ ಮುಂದಾಗಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾ ಯುವಕಾಂಗ್ರೆಸ್ ಮತ್ತು ಬ್ಲಾಕ್ ಯುವಕಾಂಗ್ರೆಸ್ ಪದಾಧಿಕಾರಿಗಳು ಮಂಗಳವಾರ ನಗರದ ಸರ್ಕಾರಿ ಕೋವಿಡ್ ಆಸ್ಪತ್ರೆಯ ಮುಂಭಾಗ ಶಾಮಿಯಾನ ಹಾಕಿ ಸ್ಥಳದಲ್ಲೇ ಬಿಸಿನೀರು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ಹಾಗೂ ಊಟವನ್ನು ತಯಾರಿಸಿ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ವಿತರಿಸುವ ಕಾರ್ಯ ಆರಂಭಿಸಿದರು.
ಬೆಳಗಿನಿಂದ ಸಂಜೆಯವರೆಗೆ ನೂರಾರು ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಬಿಸಿನೀರು ಮತ್ತು ಕಷಾಯವನ್ನು ಉಚಿತವಾಗಿ ವಿತರಿಸಿದರು. ಇದೇ ವೇಳೆ ಸೋಂಕಿತರು ಮತ್ತು ಅವರ ಸಂಬಂಧಿಕರಿಗೆ ಹಾಗೂ ರಕ್ಷಣಾ ವ್ಯವಸ್ಥೆ ಕೈಗೊಂಡಿರುವ ಗೃಹರಕ್ಷಕದಳದ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವಕಾಂಗ್ರೆಸ್ ಉಪಾಧ್ಯಕ್ಷ ರಾಹೀಲ್‍ಷರೀಫ್ ಲಾಕ್‍ಡೌನ್‍ನಿಂದಾಗಿ ರೋಗಿಗಳ ಸಂಬಂಧಿಕರಿಗೆ ಆಹಾರ ಪದಾರ್ಥಗಳನ್ನು ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲೇ ಶಾಮಿಯಾನ ಹಾಕಿ ಸ್ಥಳದಲ್ಲೇ ಬಿಸಿನೀರು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಮತ್ತು ಊಟವನ್ನು ತಯಾರಿಸಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಲಾಕ್‍ಡೌನ್ ಮುಗಿಯುವವರೆಗೂ ಈ ಸೇವೆಯನ್ನು ಮುಂದುವರೆಸಲಾಗುವುದು. ಇದರ ಜೊತೆಗೆ ಜಿಲ್ಲಾ ಯುವಕಾಂಗ್ರೆಸ್‍ನಿಂದ ಹೋಮ್ ಕ್ವಾರಂಟೈನ್‍ನಲ್ಲಿರುವ ಸೋಂಕಿತರ ಮನೆಗಳಿಗೇ ತೆರಳಿ ಕೊರೊನಾ ಸಂಬಂಧಿತ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಸುಬಾನ್, ಮುಖಂಡ ರಫೀಕ್‍ಅಹ್ಮದ್, ತರೀಕೆರೆ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸುಬಾನ್, ಹಸಿವು ಸಂಸ್ಥೆಯ ಪವನ್, ಅನಿಮಾ, ಪ್ರಶಾಂತ್, ಪ್ರದೀಪ್ ಹಾಜರಿದ್ದರು.