ನವದೆಹಲಿ : ಭಾರತ್ ಬಯೋಟೆಕ್ ನ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಅನ್ನು 2 ರಿಂದ 18 ವರ್ಷದ ಮಕ್ಕಳ ಮೇಲೆ 2 ಹಾಗೂ 3ನೇ ಹಂತದ ಪರೀಕ್ಷೆ ನಡೆಸಲು ತಜ್ಞರ ಸಮಿತಿ ಇಂದು ಅನುಮೋದನೆ ನೀಡಿದೆ.
ಏಮ್ಸ್, ದೆಹಲಿ, ಏಮ್ಸ್, ಪಾಟ್ನಾ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಕಡೆ 525 ವಿಷಯಗಳಲ್ಲಿ ಪ್ರಯೋಗ ನಡೆಯಲಿದೆ.
2 ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಹಾಗೂ ರೋಗನಿರೋಧಕ ಶಕ್ತಿಯನ್ನು ಮೌಲ್ಯಮಾಪನ ಮಾಡಲು 2 ಹಾಗೂ 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಜ್ಞರ ಸಮಿತಿಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರವಾಗಿ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ(ಸಿಡಿಎಸ್ಸಿಒ)ಯ ಕೋವಿಡ್-19 ವಿಷಯ ತಜ್ಞರ ಸಮಿತಿ (ಎಸ್ ಇಸಿ) ಚರ್ಚೆ ನಡೆಸಿ ಇಂದು ಅನುಮತಿ ನೀಡಿದೆ. ಈ ಮೊದಲು ಫೆಬ್ರವರಿ 24 ರ ಎಸ್ ಇಸಿ ಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿತ್ತು ಮತ್ತು ಪರಿಷ್ಕೃತ ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ ಸಲ್ಲಿಸಲು ಸಂಸ್ಥೆಯನ್ನು ಕೇಳಲಾಗಿತ್ತು.
ಈ ಕುರಿತು ವಿವರವಾದ ಚರ್ಚೆಯ ನಂತರ, 2 ಹಾಗೂ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಅನುಮತಿ ನೀಡಿದೆ. ಆದರೆ 2ನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡ ನಂತರ 3ನೇ ಹಂತದ ಟ್ರಯಲ್ ನಡೆಸುವ ಮೊದಲು ಮಧ್ಯಂತರ ಸುರಕ್ಷತಾ ದತ್ತಾಂಶವನ್ನು ಸಿಡಿಎಸ್ ಸಿಒಗೆ ಸಲ್ಲಿಸಬೇಕು ಎಂದು ಷರತ್ತಿನ ಮೇರೆಗೆ ಕ್ಲಿನಿಕಲ್ ಪ್ರಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.










