ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇನ್ನಿಲ್ಲ..!

90
firstsuddi

ಬೆಂಗಳೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ(104) ಅವರು ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೊರೆಸ್ವಾಮಿ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದರು. ಆದರೆ ಮತ್ತೆ ಉಸಿರಾಟದ ತೊಂದರೆ ಎದುರಾದ ಹಿನ್ನೆಲೆಯಲ್ಲಿ 8 ದಿನದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಬ್ರಾಂಕೈಟಿಸ್ (ಶ್ವಾಸನಾಳಗಳ ಒಳಪೊರೆಯ ಉರಿಯೂತ) ಸೇರಿದಂತೆ ವಿವಿಧ ಸಮಸ್ಯೆಗಳನ್ನು ದೊರೆಸ್ವಾಮಿ ಅವರು ಎದುರಿಸುತ್ತಿದ್ದರು.

ಎಚ್.ಎಸ್.ದೊರೆಸ್ವಾಮಿ ಅವರ ಪೂರ್ತಿ ಹೆಸರು ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಏಪ್ರಿಲ್ 10, 1918ರಲ್ಲಿ ಜನಿಸಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರ ಕಾಲದಲ್ಲಿ ಕನ್ನಡದದ ಜನಪ್ರಿಯ ಪತ್ರಿಕೆ ಎನಿಸಿದ್ದ ‘ಪೌರವಾಣಿ’ ವರದಿಗಾರರಾಗಿ ಜನಪ್ರಿಯರಾಗಿದ್ದರು. ಕೇವಲ 5 ವರ್ಷದವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡ ದೊರೆಸ್ವಾಮಿ ಅವರು ತಾತ ಶ್ಯಾನುಭೋಗ ಶಾಮಣ್ಣ ಅವರ ಪಾಲನೆಯಲ್ಲಿ ಬೆಳೆದು ದೊಡ್ಡವರಾದರು. ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ನಗರದ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಅಲ್ಲದೇ ಕಾರ್ಮಿಕ ಚಳವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.

ದೊರೆಸ್ವಾಮಿ ಅವರಿಗೆ ಹಲವು ಪ್ರಶಸ್ತಿ , ಪುರಸ್ಕಾರಗಳು ಲಭಿಸಿವೆ. 2017ರಲ್ಲಿ ಗಾಂಧಿ ಸೇವಾ ಪುರಸ್ಕಾರ, 2018ರಲ್ಲಿ ಬಸವ ಪುರಸ್ಕಾರ ಪ್ರಮುಖವಾದವು.

ದೊರೆಸ್ವಾಮಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಲಲಿತಮ್ಮ ಅವರನ್ನು ಮದುವೆಯಾಗಿದ್ದರು. ಲಲಿತಮ್ಮ ಅವರು 2019ರ ಡಿಸೆಂಬರ್ 17ರಂದು ನಿಧನರಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.