ಬೆಂಗಳೂರು : ಆಮ್ಲಜನಕವನ್ನು ಹೊತ್ತ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ನಿನ್ನೆ ಮಧ್ಯಾಹ್ನ ನಗರದ ವೈಟ್ ಫೀಲ್ಡ್’ ತಲುಪಿದೆ.
ಒಡಿಶಾದ ರೂರ್ಕೆಲಾದಿಂದ ನಗರಕ್ಕೆ 6 ಕಂಟೈನರ್ ಗಳಲ್ಲಿ 121 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ಬಂದಿದ್ದು, ಕರ್ನಾಟಕಕ್ಕೆ ಇಲ್ಲಿಯವರೆಗೆ 1894.71 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಕ್ಸಿಜನ್ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರು, ಅಗತ್ಯ ಇರುವ ಪ್ರದೇಶಗಳಿಗೆ ಈ ಆಕ್ಸಿಜನ್ ನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರತಿನಿತ್ಯ 850 ಮೆ.ಟನ್ ಆಕ್ಸಿಜನ್ ನಗರದಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ ನಗರಕ್ಕೆ 150 ಮೆ.ಟನ್ ಬಫರ್ ಸ್ಟಾಕ್ ಆಗಿ ಇರಿಸಿದ್ದೇವೆ. ಈ ಬಫರ್ ಸ್ಟಾಕ್’ನ್ನು ಕೊರತೆ ಎದುರಾದ ಕೂಡಲೇ ಬಳಕೆ ಮಾಡಲಾಗುತ್ತದೆ. ಜಿಲ್ಲೆಗಳಲ್ಲೂ ಬಫರ್ ಸ್ಟಾಕ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿ ಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ನಗರಕ್ಕೆ ಆಗಮಿಸಿರುವ ವೈದ್ಯಕೀಯ ಆಮ್ಲಜನಕವನ್ನು ಅಗತ್ಯವಿರುವ ಆಸ್ಪತ್ರೆಗೆ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ನಗರ ಸೇರಿದಂತೆ ರಾಜ್ಯಾದ್ಯಂತ ಆಮ್ಲಜನಕವನ್ನು ಹಂಚಿದೆ.










