ಸಿಡಿ ಗ್ಯಾಂಗ್ ಆರೋಪಿಗಳಿಗೆ ಜಾಮೀನು ನೀಡಬೇಡಿ ; ಎಸ್ ಐಟಿ ಆಕ್ಷೇಪಣೆ ಸಲ್ಲಿಕೆ…

78
firstsuddi

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಗ್ಯಾಂಗ್ ಆರೋಪಿಗಳಿಗೆ ಜಾಮೀನು ಕೊಡಬೇಡಿ ಎಂದು ಎಸ್ ಐಟಿ ಆಕ್ಷೇಪಣೆ ಸಲ್ಲಿಕೆ ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನಿಗೆ ಎಸ್ ಐಟಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದು, ಆರೋಪಿಗಳು ಈವರೆಗೆ ತಲೆಮರೆಸಿಕೊಂಡಿದ್ದಾರೆ. ತನಿಖೆಗೆ ಸಹಕಾರ ನೀಡಿಲ್ಲ. ಸಿಡಿ ಬಹಿರಂಗವಾದ ದಿನವೇ ಯುವತಿ ಹಾಗೂ ಆರೋಪಿಗಳ ನಡುವೆ ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಎಷ್ಟು ಬಾರಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ. ರಮೇಶ್ ಜಾರಕಿಹೊಳಿ ಅವರಿಂದ ಹಣ ವಸೂಲಿ ಮಾಡಿದ್ದ ಸಿಡಿ ಗ್ಯಾಂಗ್ , ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಲು ಯುವತಿಗೆ ಸೂಚಿಸಿದ್ದರು. ತನಿಖಾ ಪ್ರಮುಖ ಹಂತದಲ್ಲಿ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ ಎಂದು ಆಕ್ಷೇಪಣೆ ಸಲ್ಲಿಕೆಯಲ್ಲಿ ಎಸ್ಐಟಿ ಹೇಳಿದೆ.

ಇನ್ನು ಆರೋಪಿಗಳು ಆರ್ಥಿಕವಾಗಿ ಚೆನ್ನಾಗಿಲ್ಲ. ಆದರೂ ಸಹ ಸಾಕಷ್ಟು ಕಡೆ ಆಸ್ತಿ ಖರೀದಿಗೆ ಮುಂದಾಗಿದ್ದಾರೆ.. ಯುವತಿಗೂ ಆರೋಪಿಗಳಿಗೂ ಮೊದಲೇ ಲಿಂಕ್ ಇತ್ತು. 17 ಜನರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ ಕೆಲವೊಂದು ಹಳೆಯ ಆರೋಪಗಳಿವೆ. ಜಾಮೀನು ಸಿಕ್ಕರೆ ವಿಚಾರಣೆಗೆ ಸರಿಯಾಗಿ ಸಹಕಾರ ನೀಡುವುದಿಲ್ಲ ಅನ್ನೋ ಅನುಮಾನ ಇದೆ. ಈ ಕಾರಣದಿಂದಾಗಿ ಆರೋಪಿಗಳಿಗೆ ಜಾಮೀನು ನೀಡಬೇಡಿ ಎಂದು ಎಸ್ ಐಟಿ ನ್ಯಾಯಾಲಯ ಮುಂದೆ ಮನವಿ ಮಾಡಿಕೊಂಡಿದೆ ಎಂಬ ಮಾಹಿತಿ ತಿಳಿದುಬಂದಿದೆ.