ಮೂಡಿಗೆರೆ : ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆವರೆಗೆ ಕೊಟ್ಟಿಗೆಹಾರದಲ್ಲಿ 140.4 ಮಿ.ಮಿ ಮಳೆಯಾಗಿದೆ. ಧಾರಾಕಾರ ಮಳೆಯಿಂದ ಬಣಕಲ್, ಬಂಕೇನಹಳ್ಳಿ ಸಮೀಪ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಬಿನ್ನಡಿಯಿಂದ ಕೊಡೆಬೈಲ್ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡ ಕುಸಿದಿದ್ದು ರಸ್ತೆ ಭಾಗಶಃ ಮುಚ್ಚಿ ಹೋಗಿದೆ. ದಾರದಹಳ್ಳಿ, ಗೌಡಹಳ್ಳಿ, ಬೈರಾಪುರ ಭಾಗದಲ್ಲಿ ಕೃಷಿಪ್ರದೇಶದಲ್ಲಿ ಮಳೆನೀರು ನಿಂತು ಕಾಫಿ ಮುಂತಾದ ಗಿಡಗಳು ಮುಳುಗಡೆಯಾಗಿವೆ. ಕೊಟ್ಟಿಗೆಹಾರ ಹಾಗೂ ಬಣಕಲ್ ನಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆನೀರು ರಸ್ತೆಯಲ್ಲಿಯೆ ಹರಿಯುತ್ತಿದೆ. ಕೆಲವೆಡೆ ಮಳೆನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ.

ನಿಡುವಾಳೆಯಲ್ಲಿ ಮರ ಬಿದ್ದು ವಾಹನ ಸಂಚಾರ ಸ್ಥಗಿತ ನಿನ್ನೆ ರಾತ್ರಿ ಸುರಿದ ಬಾರಿ ಮಳೆಯಿಂದ ನಿಡುವಾಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರವೇಶದ್ವಾರದ ಮೇಲ್ಚಾಚಣಿಯ ಮೇಲೆ ಮರವೊಂದು ಬಿದ್ದಿದ್ದು ಪ್ರವೇಶದ್ವಾರ ಜಖಂಗೊಂಡಿದೆ. ರಸ್ತೆಗೂ ಕೂಡ ಮರದ ರೆಂಬೆಕೊಂಬೆಗಳು ಬಿದ್ದಿದ್ದರಿಂದ ರಸ್ತೆ ಸಂಚಾರವೂ ಸ್ಥಗಿತಗೊಂಡಿದ್ದು ಬುಧವಾರ ಬೆಳಿಗ್ಗಿನ ಜಾವ ಜಾವಳಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸಾಗರ್ ಮರ್ಕಲ್, ರಮಿತ್, ಅಭಿಷೇಕ್, ಸಂಜೀವ, ಚಂದ್ರು ಕೂವೆ, ದಿನಕರ್ ಕಲ್ಮನೆ, ಚಂದ್ರಶೇಖರ್, ಸೋಮಶೇಖರ್, ಪ್ರಶಾಂತ್, ನಾರಾಯಣ, ಮುಂತಾದವರು ಇದ್ದರು.










