ಸಚಿವರ ಸಭೆಗೆ ತೆರಳುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿ ; ಓರ್ವ ಅಧಿಕಾರಿ ಸ್ಥಳದಲ್ಲೇ ಸಾವು…

105
firstsuddi

ಕಾರವಾರ : ಉಸ್ತುವಾರಿ ಸಚಿವರ ಸಭೆಗೆ ತೆರಳುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಅಧಿಕಾರಿ ಸಾವನ್ನಪ್ಪಿದ್ದು, ನಾಲ್ಕು ಜನ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿ ಬಳಿ ನಡೆದಿದೆ.

ಸಿದ್ದಾಪುರ ತಾಲ್ಲೂಕಿನ ಲೋಕೋಪಯೋಗಿ ಇಲಾಖೆ ಎಇಇ ಮುದುಕಣ್ಣನವರ್( 58) ಮೃತ ಪಟ್ಟ ಅಧಿಕಾರಿ. ಇಂದು ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ನಡೆಯುವ ನೆರೆ ಹಾಗೂ ಕೊರೊನಾ ಸಂಬಂದದ ಸಭೆಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕರೆಯಲಾಗಿತ್ತು. ಸಭೆಗೆ ಲೋಕೋಪಯೋಗಿ ಇಲಾಖೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲ್ಲೂಕಿನ ಇಂಜಿನಿಯರ್ ಗಳು ಒಂದೇ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಅಂಕೋಲದ ಬಾಳೆಗುಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅನಾಹುತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡವರನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.