ನಾನೊಂದು ತಪ್ಪು ಮಾಡಿದ್ದೇನೆ, ನನ್ನನ್ನು ಕ್ಷಮಿಸಿ ; ತಂದೆ-ತಾಯಿಗೆ ಸಂದೇಶ ಕಳುಹಿಸಿ ಯುವಕ ಆತ್ಮಹತ್ಯೆಗೆ ಶರಣು…

85
firstsuddi

ಬೀದರ್ : ಜೀವನದಲ್ಲಿ ನಾನೊಂದು ಮಾಡಬಾರದ ತಪ್ಪು ಮಾಡಿದ್ದೇನೆ ಹೀಗಾಗಿ ನನ್ನನ್ನು ಕ್ಷಮಿಸಿ ಎಂದು ತಂದೆ-ತಾಯಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಭಾಲ್ಕಿ ತಾಲ್ಲೂಕಿನ ಕಾಸರತೂಗಾಂವ ಗ್ರಾಮದ ನಿವಾಸಿ ಅವಿನಾಶ್ ರಾಜಕುಮಾರ್ ಪಾಟೀಲ್(22 ) ಆತ್ಮಹತ್ಯೆಗೆ ಶರಣಾದ ಯುವಕ.

ಕಳೆದ ಆಗಸ್ಟ್ 4ರಂದು ಬಸವಕಲ್ಯಾಣ ನಗರದಲ್ಲಿ ನನ್ನ ಸ್ನೇಹಿತರ ಮದುವೆ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದ ಈತ, ಬಸವಕಲ್ಯಾಣ ನಗರದ ಲಾಡ್ಜ್ ವೊಂದರಲ್ಲಿ 3ದಿನಗಳ ಕಾಲ ಉಳಿದು ಆಗಸ್ಟ್ 7ರಂದು ಲಾಡ್ಜ್ ನಿಂದ ನಾಪತ್ತೆಯಾಗಿದ್ದನು. ಅಂದು ಮನೆಯವರಿಗೆ ನನ್ನನ್ನು ಕ್ಷಮಿಸಿಬಿಡಿ ನಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟ್ಸಾಪ್ ಮೂಲಕ ಸಂದೇಶ ರವಾನಿಸಿ ಅದೇ ದಿವಸ ನಗರಕ್ಕೆ ಹೊಂದಿಕೊಂಡಿರುವ ತ್ರಿಪುರಾಂತ ಕೆರೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಸವಕಲ್ಯಾಣ ನಗರ ಠಾಣೆ ಪೊಲೀಸರ ತಂಡ ನಾಪತ್ತೆಯಾಗಿರುವ ಯುವಕನ ಪತ್ತೆಗಾಗಿ ಹುಡುಕಾಟ ನಡೆಸುತ್ತಿತ್ತು. ಈ ನಡುವೆ ತ್ರಿಪುರಾಂತ ಕೆರೆಯಲ್ಲಿ ಇಂದು ಯುವಕನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಸವಕಲ್ಯಾಣ ನಗರ ಪಿಎಸ್ ಐ ಅಮರ್ ಕುಲಕರ್ಣಿ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.