ನವದೆಹಲಿ : ಕೇಂದ್ರ ಪರಿಸರ ಸಚಿವಾಲಯವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಿದ್ದು, ಇದರ ಪ್ರಕಾರ 2022ರ ವೇಳೆಗೆ ಏಕ ಬಳಕೆಯ ( ಒಂದು ಬಾರಿ ಬಳಸಿ ಎಸೆಯುವ ) ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ.
ಪಾಲಿಸ್ಟೈರಿನ್ ಸೇರಿದಂತೆ ಕೆಲವು ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 2022ರ ಜುಲೈ 1ರಿಂದ ನಿಷೇಧಿಸಲಾಗುತ್ತಿದ್ದು, ಪ್ಲಾಸ್ಟಿಕ್ ಇಯರ್ ಬಡ್ಸ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್ ಕ್ರೀಮ್ ಸ್ಟಿಕ್, ಪ್ಲೇಟ್, ಕಪ್, ಗ್ಲಾಸ್, ಫೋರ್ಕ್ ಗಳು, ಸ್ಪೂನ್ ಗಳು, ಚಾಕು, ಸ್ಟ್ರಾ, ಟ್ರೇಗಳು, ಸ್ವೀಟ್ ಬಾಕ್ಸ್, ಆಹ್ವಾನ ಪತ್ರಿಕೆಗಳು ಮತ್ತು ಸಿಗರೇಟ್ ಪ್ಯಾಕ್, ಸೇರಿದಂತೆ 100 ಮೈಕ್ರಾನ್ ಗಿಂತ ಕಡಿಮೆ ಇರುವ ಪಿವಿಸಿ ಬ್ಯಾನರ್ ಗಳು ನಿಷೇಧಕ್ಕೊಳಗಾಗಿವೆ.
2021ರ ಸೆಪ್ಟೆಂಬರ್ 30ರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳ ಗಾತ್ರವನ್ನು 50 ರಿಂದ 75 ಮೈಕ್ರಾನ್ ಗಳಿಗೆ ಮತ್ತು 120 ಮೈಕ್ರಾನ್ ಗ ಳಿಗೆ ಹೆಚ್ಚಿಸಲಾಗುವುದು. ಪ್ಲಾಸ್ಟಿಕ್ ಬ್ಯಾಗ್ ಗಳ ಗಾತ್ರವನ್ನು ಹೆಚ್ಚಿಸುವುದರಿಂದ ಅವುಗಳನ್ನು ಮರು ಬಳಸಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.










