ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿ : ಕ್ರೀಡಾ ಸಚಿವ ಡಾ.ನಾರಾಯಣಗೌಡ.

66
firstsuddi

ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿ, ಕನಿಷ್ಠ ಒಂದು ಗಂಟೆ ಕ್ರೀಡೆಗೆ ಮೀಸಲಿಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೇವಲ ಕ್ರೀಡಾಪಟುವಾಗುವುದಕ್ಕೆ ಮಾತ್ರವಲ್ಲ, ನಮ್ಮ ಜೀವನವನ್ನು ಸುಂದರವಾಗಿ ರೂಪಿಸುವಲ್ಲಿ ವ್ಯಾಯಾಮ ಮತ್ತು ಕ್ರೀಡೆಗಳು ಅತ್ಯಂತ ಮಹತ್ವ ಪಾತ್ರ ವಹಿಸುತ್ತವೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಮತ್ತು ಕ್ರೀಡೆಗಳು ಸುಲಭವಾದ ಮಾರ್ಗಗಳು. ದೈಹಿಕ ಆರೋಗ್ಯ, ವ್ಯಕ್ತಿತ್ವ ನಿರ್ಮಾಣ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಶಾರೀರಿಕ ಚಟುವಟಿಕೆಗಳ ಮೂಲಕ ಸಾಧಿಸುವುದು ದೈಹಿಕ ಶಿಕ್ಷಣದ ಮುಖ್ಯ ಉದ್ದೇಶ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳು ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯ. ಈ ಹಿಂದೆ ಎಲ್ಲ ಶಾಲಾ ಕಾಲೇಜುಗಳಲ್ಲಿ ನಿತ್ಯ ಒಂದು ಗಂಟೆ ಅವಧಿ ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ಕೈಬಿಟ್ಟಿರುವುದು, ಕ್ರಮೇಣವಾಗಿ ಕಡಿಮೆ ಮಾಡುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸಹ ಮುಖ್ಯವಾಗಿರುವುದರಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ನಿತ್ಯ ಒಂದು ಗಂಟೆ ಅವಧಿಯನ್ನು ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡುವುದು ಅತ್ಯವಶ್ಯಕವಾಗಿದೆ.

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 39,308 ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಬೇಕೆಂದರೆ ಈಗಿನಿಂದಲೇ ಸಿದ್ಧತೆ ಆಗಬೇಕು. ಹೀಗಾಗಿ ಖಾಲಿ ಇರುವ ದೈಹಿಕ ಶಿಕ್ಷಕ ಹುದ್ದೆಗಳನ್ನು ಆದ್ಯತೆಯ ಮೇಲೆ ಶೀಘ್ರವಾಗಿ ಭರ್ತಿ ಮಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಲು ಅನುಕೂಲ ಕಲ್ಪಿಸುವಂತೆ ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.