ಮೂಡಿಗೆರೆ : ಭತ್ತದ ಗದ್ದೆಯಲ್ಲಿ ಸಸಿ ನಾಟಿ ಮಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ.

129
firstsuddi

ಕೊಟ್ಟಿಗೆಹಾರ : ದ್ಯಾವನಗೂಲ್ ಗ್ರಾಮದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಭತ್ತದ ಗದ್ದೆಯಲ್ಲಿ ಸಸಿನಾಟಿ ಮಾಡುವ ಮೂಲಕ ಗಮನ ಸೆಳೆದರು.

ಕೊಟ್ಟಿಗೆಹಾರ ಸಮೀಪದ ದ್ಯಾವನಗೂಲ್ ಗ್ರಾಮದ ಯಶೋದಮ್ಮ ಸುಂದರೇಶ್ ಅವರ ಭತ್ತದ ಗದ್ದೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ನಾಟಿ ಮಾಡುತ್ತಿದ್ದ ಮಹಿಳೆಯರ ಜೊತೆ ನಾಟಿ ಪದವನ್ನು ಹಾಡುತ್ತಾ ಸಸಿನಾಟಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಭತ್ತದ ಕೃಷಿ ಮಾಡುವುದೇ ಕಡಿಮೆಯಾಗಿದೆ. ಹಿಂದಿನ ದಿನಗಳಲ್ಲಿ ಭತ್ತದ ಗದ್ದೆಗಳಲ್ಲಿ ಮನೆ ಮಂದಿ ಎಲ್ಲಾ ಸೇರಿ ಭತ್ತದ ಗದ್ದೆ ನಾಟಿಯಲ್ಲಿ ಸಂಭ್ರಮದಿಂದ ಭಾಗಿಯಾಗುತ್ತಿದ್ದ ದಿನಗಳು ಈಗ ಕಡಿಮೆಯಾಗಿದೆ. ಯುವ ಪೀಳಿಗೆಯನ್ನು ಮತ್ತೆ ಕೃಷಿಯತ್ತ ಕರೆ ತರುವ ಕಾರ್ಯ ಆಗಬೇಕಿದೆ ಎಂದರು.

ರೈತರಾದ ಸುಂದರೇಶ್ ಗೌಡ ಮಾತನಾಡಿ ಭತ್ತದ ಕೃಷಿಯಲ್ಲಿ ಲಾಭಾಂಶ ಇಲ್ಲದಿದ್ದರೂ ಕೂಡ ಭತ್ತದ ಗದ್ದೆಗಳನ್ನು ಖಾಲಿ ಬಿಡಬಾರದು ಎಂಬ ಉದ್ದೇಶದಿಂದ ಭತ್ತದ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಲಾಭಕ್ಕಿಂತ ಕೃಷಿ ಮಾಡುವಾಗ ಸಿಗುವ ಆತ್ಮತೃಪ್ತಿ ದೊಡ್ಡದು ಎಂದರು.

ಹಿರಿಯ ಕೃಷಿಕರಾದ ಅತ್ತಿಗೆರೆ ಕೃಷ್ಣೆಗೌಡ ಮಾತನಾಡಿ ಕೊಟ್ಟಿಗೆಹಾರದಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗೆ ಹೆದ್ದಾರಿ ಬದಿಯಲ್ಲಿ ಇರುವ ಭತ್ತದ ಗದ್ದೆಗಳು ತೋಟಗಳಾಗುತ್ತಿದ್ದು ಕೆಲ ಕಡೆಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಇದರಿಂದ ಒಳ ಭಾಗದಲ್ಲಿ ಇರುವ ಗದ್ದೆಗಳ ರೈತರಿಗೆ ತೊಂದರೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ.ಎಂ ಭರತ್, ಬಿ.ಎಂ ಶರತ್, ರಘುಪತಿ, ಸತೀಶ್ ಬಾಳೂರು, ಆದರ್ಶ ತರುವೆ, ಕವೀಶ್, ಸುರೇಶ್, ಸಂಜಯ್‍ಗೌಡ, ಪ್ರದೀಪ್ ಬಿನ್ನಡಿ, ವೇಣುಗೋಪಾಲ್, ಸಂದೀಪ್, ಗಣೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಸ್ಕೌಟ್ ಮತ್ತು ಗೈಡ್ ತಾಲ್ಲೂಕು ಕಾರ್ಯದರ್ಶಿ ಜಯಪಾಲ್, ಸ್ಥಳಿಯರಾದ ಡಾ.ನವೀನ್, ಅಶ್ವಥ್ ಜಾವಳಿ ಮುಂತಾದವರು ಇದ್ದರು.