ಚಿಕ್ಕಮಗಳೂರು : ಖಾಲಿ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಮಾಲೀಕರಿಗೆ ಸೂಚಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

107
firstsuddi

ಚಿಕ್ಕಮಗಳೂರು : ನಗರದಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಅವುಗಳ ಮಾಲೀಕರಿಗೆ ಸೂಚಿಸುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರ ಜೊತೆಗೆ ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಈ ನಿವೇಶನಗಳಲ್ಲಿ ಹಾಕುತ್ತಿದ್ದಾರೆ. ಇದರಿಂದಾಗಿ ನಿವೇಶನಗಳು ಕಸದ ಕೊಂಪೆಯಾಗಿವೆ ಎಂದು ಆರೋಪಿಸಿದರು.

ಖಾಲಿ ನಿವೇಶನಗಳಲ್ಲಿ ಗಿಡ ಗಂಟಿಗಳು ಬೆಳೆದು ಕಸದ ಕೊಂಪೆಯಾಗಿ ದುರ್ವಾಸನೆ ಬೀರುತ್ತಿರುವುದರಿಂದಾಗಿ ಸಾರ್ವಜನಿಕರು ಮೂಗು ಬಿಗಿ ಹಿಡಿದು ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಆದೇಶಿಸಬೇಕು. ಸೂಚನೆಯನ್ನು ಪಾಲಿಸದಿದ್ದಲ್ಲಿ ಅವುಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮಾನಾಯಕ್, ಖಜಾಂಚಿ ಎಂ.ಎಂ.ಗೋಪಾಲಗೌಡ, ಜಿಲ್ಲಾಧ್ಯಕ್ಷ ಕುಮಾರ್, ತಾಲ್ಲೂಕು ಅಧ್ಯಕ್ಷ ಎನ್.ಮಂಜುನಾಥ್, ಕಡೂರು ತಾಲ್ಲೂಕು ಅಧ್ಯಕ್ಷ ರಮೇಶ್ ನಾಯ್ಕ, ನ್ಯಾಯವಾದಿ ರುದ್ರೇಗೌಡ, ಪ್ರದೀಪ್, ಪ್ರಕಾಶ್, ರಾಜು ಹಾಜರಿದ್ದರು.