ಬೆಂಗಳೂರು : ವಿಧಾನಸಭಾ ಅಧಿವೇಶನದಲ್ಲಿ ಬೆಲೆ ಏರಿಕೆ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಗುಡುಗಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಧರಣಿ ನಡೆಸಿದ ನಮ್ಮನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಆದರೆ ಇಂದಿರಾ ಗಾಂಧಿ ಅವರ ಆಡಳಿತ ಅವಧಿಯಲ್ಲಿ ಪೆಟ್ರೋಲ್ ಬೆಲೆ 7 ಪೈಸೆ ಹೆಚ್ಚಾಗಿತ್ತು. 100 ಪೈಸೆ ತೆರಿಗೆ ಇತ್ತು. ಆಗಾ ಇಂದಿರಾ ಗಾಂಧಿ ಸರ್ಕಾರವನ್ನು ವಾಜಪೇಯಿ ಅವರು ಕ್ರಿಮಿನಲ್ ಲೂಟ್ ಎಂಬ ಪದ ಬಳಿಸಿದ್ದರು. ಈಗ ನಾನು ಯಾವ ಪದ ಬಳಸಬೇಕು ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ವ್ಯಂಗ್ಯ ಮಾಡಿದರು.
ಒಂದೊಂದು ವರ್ಷದಲ್ಲಿ ಗ್ಯಾಸ್, ಪೆಟ್ರೋಲ್ ಬೆಲೆ ಯದ್ವಾತದ್ವಾ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆ ನಮ್ಮ ಕೈಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ತೈಲ ಕಂಪನಿಗಳು ಏರಿಕೆ ಮಾಡುತ್ತವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಇದಕ್ಕೆಲ್ಲ ಯಾರು ಹೊಣೆ. ಎಲ್ಲಾ ಪದಾರ್ಥಗಳು ಕೂಡ ಇವತ್ತು ಗಗನಕ್ಕೇರಿವೆ. ಪೆಟ್ರೋಲ್ ಬೆಲೆ ಏರಿಕೆಯಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.










